ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಭಾನುವಾರ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಆಸ್ಪತ್ರೆ ಎದುರು ಬಾಣಂತಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ಮೃತ ದುರ್ದೈವಿ. ವೈಶಾಲಿ ಅವರಿಗೆ ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಇರದಿದ್ದ ಕಾರಣ, ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಆದರೆ, ಭಾನುವಾರ ಬೆಳಗ್ಗೆ ವೈಶಾಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ, ಐಸಿಯುಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ.
ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯವಿಲ್ಲದ ಯಾವುದೋ ಮಾತ್ರೆಗಳನ್ನು ಕೊಟ್ಟಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಣಂತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ, ಸಾವಿನ ಸತ್ಯ ತಿಳಿದಿದೆ ಎಂದು ಹೇಳಲಾಗಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲೇ 41 ಶಿಶುಗಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಕಳೆದ ಆರು ತಿಂಗಳೊಳಗೆ ಒಟ್ಟು 322 ನವಜಾತ ಶಿಶುಗಳು ಮತ್ತು 29 ತಾಯಂದಿರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ, ಜಿಲ್ಲಾಸ್ಪತ್ರೆಯ್ಲಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.