ಬಹುಜನ ಸಮಾಜದಲ್ಲಿ ಬಾಬಾಸಾಹೇಬರು ಏಕಾಂಗಿಯಾಗಿ ತಮ್ಮ ವಿದ್ವತ್ ಜ್ಞಾನದಿಂದ ಮನುವಾದಿ ವ್ಯವಸ್ಥೆಗೆ ಸವಾಲಾಗಿದ್ಧರು ಮತ್ತು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸುವ ಮೂಲಕ ಕಾನೂನಿನ ಮೂಲಕ ಸರ್ವರೂ ಸಮಾನರು ಎಂದು ಸಾರಿದರು ಎಂದು ಬೆಳಗಾವಿ ಜಿಲ್ಲೆ ಭೀಮವಾದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸಿದ್ಧಾರ್ಥ ಸಿಂಗೆ ಹೇಳಿದರು.
ಜಿಲ್ಲೆಯ ಕಾಗವಾಡ ತಾಲೂಕು ಭೀಮವಾದ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬಾಬಾಸಾಹೇಬರು ಭಾರತವನ್ನು ಪ್ರಬುದ್ಧ ಭಾರತವನ್ನಾಗಿಸುವ ಸಂಕಲ್ಪ ಮಾಡಿದ್ದರು. ಅವರು ಬುದ್ಧನಿಗೆ ಶರಣಾದ ಅಲ್ಪಾವಧಿಯಲ್ಲೇ ಮಹಾರಾಷ್ಟ್ರದ ನಾಗಪುರ ಹಾಗೂ ಚಂದ್ರಪೂರದಲ್ಲಿ ಲಕ್ಷಾಂತರ ಜನರಿಗೆ ಬೌದ್ಧ ಧಮ್ಮದ ದಿಕ್ಷೆ ನೀಡುವ ಮೂಲಕ ಭಾರತದಲ್ಲಿ ಅವಸಾನವಾಗಿದ್ದ ಬೌದ್ಧ ಧರ್ಮಕ್ಕೆ ಮರುಹುಟ್ಟು ನೀಡಿದರು. ಬುದ್ಧನ ಸಂದೇಶಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಇದು ಬುದ್ಧ ಭಾರತ’ವೇ ಹೊರತು ಮನುವಾದಿಗಳ ಭಾರತವಲ್ಲ ಎಂಬುದನ್ನು ಸಾಬೀತುಪಡಿಸಿದರು. ಇತ್ತೀಚಿಗೆ ಬಾಬಾಸಾಹೇಬರ ಅನುಯಾಯಿಗಳು ಎನಿಸಿಕೊಂಡವರು ಪುರೋಹಿತಶಾಹಿ ಸಂಸ್ಕೃತಿಗೆ ಗುಲಾಮರಾಗುತ್ತಿರುವುದು ವಿಷಾದನೀಯ. ಇಂದಿನ ಯುವ ಪೀಳಿಗೆ ಬಾಬಾಸಾಹೇಬರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.
ಸಂಚಾಲಕ ಸಂಜೀವ ಕಾಂಬಳೆ ಮಾತನಾಡಿ, ಅಂಬೇಡ್ಕರರು ಸಂವಿಧಾನ ಸಭೆಗೆ ಆಯ್ಕೆಯಾಗದಂತೆ ಮನುವಾದಿಗಳು ಬಗಿರಥ ಪ್ರಯತ್ನ ಮಾಡಿದ ಹೋರತಾಗಿಯೂ ಬಂಗಾಲದ ನಮೋಶೂದ್ರರು ಬಾಬಾಸಾಹೇಬರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಲು ಸಫಲರಾಗುತ್ತಾರೆ. ಭಾರತದ ವಿಭಜನೆಯ ನಂತರ ಮತ್ತೆ ಅನೇಕ ರಾಜಕೀಯ ಬೆಳವಣಿಗೆಗಳ ನಡುವೆ ಸಂವಿಧಾನ ಸಭೆಗೆ ಆಯ್ಕೆಯಾದ ಬಾಬಾಸಾಹೇಬರು ತಮಗೊಪ್ಪಿಸಿದ ಜವಾಬ್ದಾರಿಯನ್ನು ತಮ್ಮ ಹದಗೆಡುತ್ತಿದ್ದ ಆರೋಗ್ಯವನ್ನು ಲೆಕ್ಕಿಸದೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಸಾರುವ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ್ದಾರೆ. ಮೆಣದ ಬತ್ತಿಯಂತೆ ಬಹುಜನ ಭಾರತೀಯರ ಬದುಕಿನಲ್ಲಿ ಬೆಳಕು ಮೂಡಿಸಿದ್ದಾರೆ ಇದರ ಅರಿವು ನಮಗೆಲ್ಲ ಇರಬೇಕು. ಬಾಬಾಸಾಹೇಬರು ನೀಡಿದ ಸಂವಿಧಾನದಿಂದ ಬದುಕು ಕಟ್ಟಿಕೊಂಡಿರುವ ನಾವು ಸಂವಿಧಾನ ರಕ್ಷಣೆಗೆ ಎಲ್ಲ ರೀತಿಯಲ್ಲೂ ಸಜ್ಜಾಗಬೇಕಾಗಿದೆ ಎಂದರು.
ನ್ಯಾಯವಾದಿ ಅಮಿತ್ ದೀಕ್ಷಾಂತ್ ಮಾತನಾಡಿ, ಶಿಕ್ಷಣ ಸಂಘಟನೆ ಮತ್ತು ಹೋರಾಟ ಈ ಮೂರು ಸೂತ್ರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ವಿದ್ಯಾಧರ ದೊಂಡಾರೆ ಸಮಾಜದ ಅಧ್ಯಕ್ಷ ಪ್ರಕಾಶ್ ದೊಂಡಾರೆ ಮಾತನಾಡಿದರು.
ಈ ವರದಿ ಓದಿದ್ದೀರಾ? ಹಾವೇರಿ | ಅಂಬೇಡ್ಕರ್ ದೇಶದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿದ್ದಾರೆ: ಉಡಚಪ್ಪ ಮಾಳಗಿ
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ ಟೊಣಪೆ, ಮಹಿಳಾ ಒಕ್ಕೂಟದ ಸಂಗೀತಾ ಕಾಂಬಳೆ, ರೇಖಾ ಬಂಗಾರಿ, ಆರತಿ ಕಾಂಬಳೆ, ನಿಕೀತಾ ಗಡಾದೆ, ಗೀತಾ ಕಾಂಬಳೆ, ಸವಿತಾ ಸರಿಕರ, ವಿಶಾಲ್ ದೊಂಡಾರೆ ರಾಹುಲ್ ಕಾಂಬಳೆ, ಅನಿಲ್ ಕಾಳೆ, ಪ್ರಮೋದ್ ಕಾಂಬಳೆ, ಸಚಿನ್ ಕಾಂಬಳೆ, ಪ್ರಭಾಕರ್ ಕಾಂಬಳೆ ಉಪಸ್ಥಿತರಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ ಕಾಂಬಳೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ರೊಹಿತ ಬಸನಾಯಿಕ ವಂದನಾರ್ಪಣೆ ಮಾಡಿದರು.