ಕಿಡಿಗೇಡಿಗಳು ಕುರ್‌ಆನ್ ಗ್ರಂಥವನ್ನು ಸುಟ್ಟು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂತಿಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಕುರ್‌ಆರ್‌ಅನ್ನು ಸುಟ್ಟ ದುಷ್ಕರ್ಮಿಗಳನ್ನು ಬಂಧಿಸುವಂತೆ ಮುಸ್ಲಿ ಸಮುದಾಯದ ಮುಖಂಡರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯವಹಿಸಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಸಂತಿಬಸ್ತವಾಡ ಗ್ರಾಮದಲ್ಲಿ ಮೇ 12ರಂದು ಕೋಮುವಾದಿ ದುಷ್ಕರ್ಮಿಗಳು ಕುರ್‌ಆನ್ ಸುಟ್ಟು ಹಾಕಿದ್ದರು. ಘಟನೆ ನಡೆದು ಐದಾರು ದಿನಗಳು ಕಳೆದಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬಂಧಿಸಿಲ್ಲವೆಂದು ಆರೋಪಿಸಿ ಮುಸ್ಲಿಂ ಮುಖಂಡರು ಮತ್ತು ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ 10 ಸಾವಿರಕ್ಕೂ ಹೆಚ್ಚು ಮುಸ್ಲಿಮರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಸ್ವೀಕರಿಸಿದ ಜಿಲ್ಲಾಧಿಕಾರಿ, “ಆರೋಪಿಗಳನ್ನು ಬಂಧಿಸಲು ಐದಾರು ದಿನ ಕಾಲಾವಕಾಶ ಕೊಡಿ. ಐದು ದಿನಗಳೊಳಗೆ ಆರೋಪಿಗಳನ್ನು ಬಂಧಿಸುತ್ತೇವೆ. ಪ್ರತಿಭಟನೆಯನ್ನು ನಿಲ್ಲಿಸಿ” ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?
ಏಪ್ರಿಲ್ 12ರಂದು ಸಂತಿಬಸ್ತವಾಡ ಗ್ರಾಮದ ಈದ್ಗಾ ಮೈದಾನದ ಮಿನಾರ್‌ಗಳಿಗೆ ಧಕ್ಕೆ ಉಂಟುಮಾಡಲಾಗಿತ್ತು. ಆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆ ಘಟನೆ ಬೆನ್ನಲ್ಲೇ, ಅದೇ ಗ್ರಾಮದಲ್ಲಿ ಇದೀಗ ಕುರ್‌ಆನ್‌ಅನ್ನು ಸುಟ್ಟು ಧಾರ್ಮಿಕ ಉದ್ವಿಗ್ನತೆ ಉಂಟುಮಾಡಲು ಯತ್ನಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಇನ್ಸ್‌ಪೆಕ್ಟರ್ ಕರ್ತವ್ಯಲೋಪ ಕಂಡುಬಂದಿದೆ ಎಂದು ಆರೋಪಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಹಿರೇಮಠ ಅವರನ್ನು ಅಮಾನತು ಮಾಡಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.