ಕಿತ್ತೂರು ಉತ್ಸವದ ಭಾಗವಾಗಿ ವೀರರಾಣಿ ಕಿತ್ತೂರು ಚೆನ್ನಮ್ಮ ಜ್ಯೋತಿಯು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅಕ್ಟೋಬರ್ 17ರಂದು ವೀರ ಜ್ಯೋತಿಯು, ಕಾಗವಾಡ ತಾಲೂಕನ್ನು ತಲುಪಿದ್ದು, ತಾಲೂಕಿನ ಜನತೆ ಸಂಭ್ರಮದಿಂದ, ವೀರ ಜ್ಯೋತಿಯನ್ನು ಬರಮಾಡಿಕೊಂಡರು. ಅಕ್ಟೊಬರ್ 23ರಿಂದ 25ರವರೆಗೆ ಕಿತ್ತೂರು ಉತ್ಸವ ನಡೆಯಲಿದೆ.
ಬೆಂಗಳೂರಿನಿಂದ ಹೊರಟ ವೀರ ಜ್ಯೋತಿ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮಕ್ಕೆ ತಲುಪಿದೆ. ವೀರ ಜ್ಯೋತಿಯನ್ನು ತಾಲೂಕು ಆಡಳಿತ ಸ್ವಾಗತಿಸಿತು. ತಹಸೀಲ್ದಾರ್ ರಾಜೇಶ್ ಬುರ್ಲಿ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಅಂಗನವಾಡಿ ಕಾರ್ಯಕರ್ತೆಯರು ಆರತಿ ಎತ್ತಿ, ಜಯ ಘೋಷಗಳೊಂದಿಗೆ ಮೆರವಣಿಗೆ ಮೂಲಕ, ಕಾಗವಾಡ ತಾಲ್ಲೂಕಿನ ಉಗಾರ ಗ್ರಾಮಕ್ಕೆ ಜ್ಯೋತಿಯನ್ನು ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ಕಾಗವಾಡ ತಾಲೂಕಿನ ತಹಸೀಲ್ದಾರ್, “ವೀರರಾಣಿ ಚೆನ್ನಮ್ಮನ ಸಾಹಸ ಶೌರ್ಯ ನಾಡಿನ ಜನರಿಗೆ ತಿಳಿಸುವ ಉದ್ದೇಶದಿಂದ ವೀರಜ್ಯೋತಿ ಸಂಚಾರಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈಗ ಕಾಗವಾಡ ತಾಲೂಕಿಗೆ ಬಂದಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳು ಬಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಸಿಡಿಪಿಒ ಸಂಜುಕುಮಾರ ಸದಲಗೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಪೂಜಾರಿ, ಸಂಜಯ ತಳವಲಕರ, ಕಂದಾಯ ನಿರೀಕ್ಷಕ ಎಸ್.ಬಿ. ಮುಲ್ಲಾ, ಎಎಸ್‌ಐಬಿಎಂ ರಜಾಕನವರ ಬಾಬಾಸಾಹೇಬ ಪಾಟೀಲ್, ದೀಪಕ ಕುಟ್ಟವಾಡೆ, ಸಂಜೀವ ಸೂರ್ಯವಂಶಿ ಭಾಗಿಯಾಗಿದ್ದರು.