ಸರ್ಕಾರಿ ಶಾಲೆಯ ಮುಸ್ಲಿಂ ಮುಖ್ಯಶಿಕ್ಷಕರನ್ನು ವರ್ಗಾವಣೆ ಮಾಡಿಸಬೇಕೆಂದು ಸಂಚು ರೂಪಿಸಿದ್ದ ಕೋಮುವಾದಿ ದುರುಳರು ಶಾಲೆಯ ನೀರಿನ ಟ್ಯಾಂಕ್ ವಿಷ ಹಾಕಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದುರ್ಘಟನೆ ನಡೆದಿದೆ. ಆ ನೀರು ಸೇವಿಸಿದ್ದ 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ಕೀಟನಾಶಕ ಸುರಿದಿದ್ದರು ಎಂದು ತಿಳಿದುಬಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಸಾಗರ ಪಾಟೀಲ, ನಾಗನಗೌಡ ಪಾಟೀಲ ಹಾಗೂ ಕೃಷ್ಣ ಮಾದರ ಎಂದು ಗುರುತಿಸಲಾಗಿದೆ.
“ಆರೋಪಿಗಳು ಶ್ರೀರಾಮ ಸೇನೆ ಸಂಘಟನೆ ಜೊತೆ ಗುರುತಿಸಿಕೊಂಡಿದ್ದಾರೆ. ಹೂಲಿಕ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 13 ವರ್ಷಗಳಿಂದ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸುತ್ತಿರುವ ಸುಲೇಮಾನ್ ಗೋರಿನಾಯ್ಕ ಅವರನ್ನು ವರ್ಗಾವಣೆ ಮಾಡಿಸಬೇಕೆಂದು ಆರೋಪಿಗಳು ಸಂಚು ರೂಪಿಸಿದ್ದರು. ಮುಖ್ಯಶಿಕ್ಷಕರಿಗೆ ಕೆಟ್ಟ ಹೆಸರು ಬರುವಂತೆ ಮಾಡುವುದಕ್ಕಾಗಿ ನೀರಿಗೆ ವಿಷ ಸುರಿದಿದ್ದಾರೆ” ಎಂದು ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
“ಕೃತ್ಯ ಎಸಗಿರುವ ಆರೋಪಿಗಳು ಸ್ನೇಹಿತರಾಗಿದ್ದಾರೆ. ಆರೋಪಿ ನಾಗನಗೌಡ ಎಂಬಾತ ಮತ್ತೋರ್ವ ಆರೋಪಿ ಸಾಗರ್‌ನ ಸಂಬಂಧಿಯೂ ಆಗಿದ್ದಾನೆ. ಅಂತರ್ಜಾತಿ ಪ್ರೀತಿಯಲ್ಲಿದ್ದ ಕೃಷ್ಣನನ್ನು ಸಾಗರ್ ಮತ್ತು ನಾಗನಗೌಡ ಬೆದರಿಸಿ, ಆತನ ಮೂಲಕ ಕೃತ್ಯ ಎಸಗಿದ್ದಾರೆ” ಎಂದು ತಿಳಿಸಿದ್ದಾರೆ.