ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ಕ್ಷೌರ ವಿಚಾರದಲ್ಲಿ ಕೊಲೆಯಾದ ದಲಿತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಿಪಿಐಎಂ ಸಂಘಟನೆಯ ಮುಖಂಡರು ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹ ವ್ಯಕ್ತಪಡಿಸಿದರು.
ದಲಿತ ಕ್ಷೌರ ಮಾಡುವ ವಿಚಾರದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿ ಯುವಕ ಯಮನೂರಪ್ಪರವರ ಕೊಲೆ ಜಾತಿ, ದೌರ್ಜನ್ಯ ಹಾಗೂ ಅಸ್ಪೃಶ್ಯತೆಗೆ ಕರಾಳ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಯನ್ನು ಸಿಪಿಐಎಂ ಖಂಡಿಸುತ್ತದೆ. ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಕೊಲೆಯಾದವನ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಬೇಕೆಂದು ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ)ಪಕ್ಷದ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಜಿ.ಎಮ್.ಜೈನೆಖಾನ್, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷವಾದರೂ ಇನ್ನೂ ಕೂಡ ಅಸ್ಪಶ್ಯತೆಯ ಆಚರಣೆಗಳು ನಡೆಯುತ್ತಲಿವೆ. ಜಾತಿ ತಾರತಮ್ಯಗಳು ಅಡೆತಡೆಯಿಲ್ಲದೆ ರಾಜಾರೋಷವಾಗಿ ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಸುದ್ದಿ ವೆಬ್‌ಸೈಟ್, ಯುಟ್ಯೂಬ್‌ಗಳಿಗೂ ಸಿಗಲಿದೆ ಸರ್ಕಾರದ ಜಾಹೀರಾತು; ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಪ್ರಕಟ
“ಸಾವಿರಾರು ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನರಿಗೆ ಕ್ಷೌರ ನಿರಾಕರಣೆ ಅಭಾದಿತವಾಗಿ ಮುಂದುವರೆದಿದೆ. ಎಷ್ಟೋ ಜನ ನಗರ ಪ್ರದೇಶಗಳಿಗೆ ಹೋಗಿ ಕ್ಷೌರ ಮಾಡಿಕೊಂಡು ಬರುವ ಪರಿಸ್ಥಿತಿ ಬಂದಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು” ಎಂದು ಸರಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ನಾಗಪ್ಪ ಸಂಗೊಳ್ಳಿ, ತುಳಸಮ್ಮ ಮಾಳದಕರ, ಮೀನಾಕ್ಷಿ ಸಂಶಿ, ರಾಚವ್ವ ರಾಮದುರ್ಗ, ಫಾರೂಖ್ ಶೇಖ್ ಮುಂತಾದವರು ಭಾಗವಹಿಸಿದ್ದರು.
