ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ ರಕ್ಷಣಾ ಇಲಾಖೆಯ ಅಡಿಯಲ್ಲಿರುವ ದಂಡುಮಂಡಳಿಯ ಸಿಇಒ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸರ್ಕಾರಿ ಅಧಿಕಾರಿ ಕೆ ಆನಂದ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರು ಬೆಳಗಾವಿಯಲ್ಲಿರುವ ರಕ್ಷಣಾ ಇಲಾಖೆಯ ಕ್ಯಾಂಪ್‌ನಲ್ಲಿದ್ದ ಸರ್ಕಾರಿ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಅವರ ನಿವಾದ ಮೇಲೆ ಸಿಬಿಐ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ.
ಅವರ ಮೃತದೇಹ ಬಳಿ ಎರಡು ಡೆತ್‌ನೋಟ್‌ಗಳು ಸಿಕ್ಕಿವೆ. ಒಂದು ಡೆತ್‌ನೋಟ್‌ನಲ್ಲಿ, ತಂದೆ ತಾಯಿಗೆ ಕ್ಷಮೆಯಾಚಿಸಿದ್ದಾರೆ. “ಬೇರೆ ಪ್ರಪಂಚಕ್ಕೆ ಹೋಗುತ್ತಿದ್ದೇನೆ. ನಿಮ್ಮನ್ನ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ. ಸೋದರ ಅಥವಾ ಸಹೋದರಿಯ ಮಗುವಾಗಿ ಹುಟ್ಟಿ ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ” ಎಂದು ಬರೆದಿದ್ದಾರೆ.
ಮತ್ತೊಂದು ಡೆತ್‌ನೋಟ್‌ನಲ್ಲಿ, “ಆನ್‌ಲೈನ್ ಮತ್ತು ಆಫ್‌ಲೈನ್ ಜೂಜಾಟದಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಸಾಲ ಮಾಡಿಕೊಂಡಿದ್ದೇನೆ. ಸಾಲ ತೀರಿಸಲು ಆಗುತ್ತಿಲ್ಲ. ಹೀಗಾಗಿ, ಆತ್ಮಹತ್ಯೆ ದಾರಿ ಹಿಡಿದಿದ್ದೇನೆ” ಎಂದು ಬರೆದಿದ್ದಾರೆ.
ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಮತ್ತು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಆನಂದ್ ಅವರು ಎರಡು ದಿನಗಳಿಂದ ಕೊಠಡಿಯಿಂದ ಹೊರ ಬಂದಿರಲಿಲ್ಲ. ಊಟವನ್ನೂ ತೆಗೆದುಕೊಂಡಿರಲಿಲ್ಲ. ಇದನ್ನು ಗಮನಿಸಿದ ಕ್ಯಾಂಪ್‌ನಲ್ಲಿದ್ದವರು ಪೊಲೀಸರಿಗೆ ಹಾಗೂ ಎಂಎಲ್‌ಆರ್‌ಸಿ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಾಗಿಲು ಮುರಿದು ನೋಡಿದಾಗ, ಮೃತದೇಹ ಪತ್ತೆಯಾಗಿದೆ. ಹಾಸಿಗೆಯಲ್ಲಿ ವಿಷದ ಬಾಟಲಿ ಕೂಡ ಸಿಕ್ಕಿದೆ ಎಂದು ವರದಿಯಾಗಿದೆ.