ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಎಮ್‌ಇಎಸ್ ಮಹಾಮೇಳಾವ್‌ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅನುಮತಿ ನಿರಾಕರಿಸಿದ್ದಾರೆ. ಅನುಮತಿ ನಿರಾಕರಣೆ ಮಧ್ಯೆಯೂ ಎಂಇಎಸ್ ಮಹಾಮೇಳಾವ್ ನಡೆಸುವ ಸಾಧ್ಯತೆ ಇದ್ದು, ಬೆಳಗಾವಿಯ ಮೂರು ಪ್ರಮುಖ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲೇಲೇ ಮೈದಾನ, ಕ್ಯಾಂಪ್ ಪೊಲೀಸ್ ಠಾಣೆಯ ಧರ್ಮವೀರ ಸಂಭಾಜಿ ಸರ್ಕಲ್, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನವನದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಡಿ. 4ರ ಬೆಳಗ್ಗೆ 6ರಿಂದ ಡಿ.5, ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮಹಾಮೇಳಾವದಿಂದ ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ಭಂಗವಾಗಿ ನಗರದಾದ್ಯಂತ ಹಲವಾರು ಅಹಿತಕರ ಘಟನೆಗಳು ನಡೆದು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹಾರಾಷ್ಟ್ರದ ಸಚಿವರು, ಶಾಸಕರು ಹಾಗೂ ಮರಾಠಾ ಮುಖಂಡರು ಆಗಮಿಸುವ ಹಿನ್ನೆಲೆಯಲ್ಲಿ ಗಡಿ ವಿಚಾರ ಕುರಿತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.
ಇನ್ನು ರಾಜ್ಯಾದ್ಯಂತ ಹಲವಾರು ಕನ್ನಡಪರ ಸಂಘಟನೆಗಳು ಮಹಾಮೇಳಾವ್ ಕಾರ್ಯಕ್ರಮಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಬಾರಿ ಅನುಮತಿ ನೀಡಿದರೆ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ಮಹಾಮೇಳಾವ್‌ಗೆ ಅನುಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.