ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತ ಸಮುದಾಯ ಆದಾಯಕ್ಕಾಗಿ ಪರದಾಡುತ್ತಿದೆ ಹಾಗೂ ಅತಿ ವೇಗದ ಬೆಳೆ ಮತ್ತು ಆದಾಯಕ್ಕಾಗಿ ರಾಸಾಯನಿಕ ರಸ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಕೃಷಿ ಭೂಮಿಯು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಜೊತೆಗೆ ಇಳುವರಿಯೂ ಕಡಿಮೆಯಾಗಿ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಇಲ್ಲೊಬ್ಬರು ರೈತರು ಸಾವಯವ ಕೃಷಿಯಿಂದಲೇ ಸ್ವಾವಲಂಬಿಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಆ ರೈತನ ಹೆಸರು ಕಲ್ಲಪ್ಪ ಗುರುಪಾದಪ್ಪ ಯಲಡಗಿ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೆಗುಣಸಿ ಗ್ರಾಮದ ಅವಿಭಕ್ತ ಕುಟುಂಬದ 65 ವಯಸ್ಸಿನ, 7ನೇ ತರಗತಿಯವರೆಗೆ ಓದಿರುವ ಕಲ್ಲಪ್ಪ ಗುರುಪಾದಪ್ಪ ಯಲಡಗಿಯವರು ಕಳೆದ 20 ವರ್ಷಗಳಿಂದ ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ, ಕೃಷಿಯನ್ನೇ ನಂಬಿಕೊಂಡು ಸ್ವಾವಲಂಬಿಯಾಗಿದ್ದಾರೆ.

ಕಲ್ಲಪ್ಪ ಗುರುಪಾದಪ್ಪ ಯಲ್ಲಡಗಿಯವರು ಸಾವಯವ ಕೃಷಿ ಆರಂಭಿಸಿದ ನಂತರ ಭೂಮಿಯಲ್ಲಿ ಒಳ್ಳೆಯ ಇಳುವರಿ ಪಡೆದಿದ್ದಾರೆ. ಸಾವಯವ ಕೃಷಿ ಮುಂದುವರೆಸಿ ತಮ್ಮ ತೋಟದಲ್ಲಿಯೇ ಎರೆಹುಳ ಘಟಕ, ಬೇವಿನ ಹಿಂಡಿ ತಯಾರಿಕೆ, ಅನೇಕ ಸಾವಯವ ಕೃಷಿ ಪೂರಕ ಘಟಕಗಳನ್ನೂ ಕೂಡ ಸ್ಥಾಪಿಸಿದ್ದಾರೆ. ಅವಶ್ಯವಿದ್ದಷ್ಟು ಎರೆಹುಳು ಗೊಬ್ಬರ ಬಳಸಿ ಉಳಿದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಆ ಮೂಲಕ ಕೂಡ ಆದಾಯ ಗಳಿಸುತ್ತಿದ್ದಾರೆ.

ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸೆಣಬನ್ನೂ ಕೂಡ ಬೆಳೆಯುತ್ತಾರೆ. ರೋಗ ಕೀಟಗಳ ಹತೋಟಿಗಾಗಿ ಬೀಜಾಮೃತ, ಜೀವಾಮೃತ, ಪಂಚಗವ್ಯ ದಶರ್ಪಣಿ, ಹಸಿ ಮೆಣಸಿನಕಾಯಿ ಕಷಾಯಗಳನ್ನು ಬೆಳೆಗಳಿಗೆ ಸಿಂಪಡಿಸಿ ಕೃಷಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸೋಯಾಬಿನ್, ಗೋಧಿ, ಜವೆಗೋಧಿ, ಹೆಸರು, ಸೂರ್ಯಕಾಂತಿ ಬೆಳೆಯುತ್ತಾರೆ ಮತ್ತು ಕಬ್ಬಿಣ ಕಣ್ಣು ತೆಗೆಯುವ ಯಂತ್ರವನ್ನು ಕಂಡು ಹಿಡಿದಿದ್ದು, ರೈತಾಪಿ ವರ್ಗಕ್ಕೆ ನೆರವಾಗಿದ್ದಾರೆ.
ಸಾವಯವ ಕೃಷಿಕ ಸಂಘವನ್ನೂ ಸ್ಥಾಪಿಸಿದ್ದಲ್ಲದೇ, ತಮ್ಮ ಊರಿನ ಹಾಗೂ ಬೇರೆ ಊರಿನ ರೈತರಿಗೆ ಮಾಹಿತಿ ಮಾರ್ಗದರ್ಶನ ನೀಡುತ್ತಾರೆ. ಸ್ವಂತ ಆಹಾರ ಸಂಸ್ಕರಣಾ ಘಟಕವನ್ನು ಹೊಂದಿದ್ದು ಕಾಳುಗಳ ಹಿಟ್ಟು, ಬೇಳೆ, ಅರಿಶಿನ ಪುಡಿ, ವಿವಿಧ ಉತ್ಪನ್ನಗಳನ್ನು ಕೂಡ ಮಾರಾಟ ಮಾಡುತ್ತಾರೆ.
ತಮ್ಮ ಸಾವಯವ ಕೃಷಿಯ ಬಗ್ಗೆ ಈ ದಿನ .ಕಾಮ್ ಜೊತೆ ಮಾತನಾಡಿರುವ ರೈತ ಕಲ್ಲಪ್ಪ ಗುರುಪಾದಪ್ಪ ಯಲ್ಲಡಗಿಯವರು, “10 ಗುಂಟೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದೇನೆ. ಎರೆಹುಳು ಗೊಬ್ಬರ ಘಟಕದಲ್ಲಿ ವರ್ಷಕ್ಕೆ 60-70 ಟನ್‌ಎರೆಗೊಬ್ಬರ ತಯಾರಿಸುತ್ತೇವೆ ಹಾಗೂ ಈ ಗೊಬ್ಬರವನ್ನು ನಾವು ನಮ್ಮ ಜಮೀನಿಗೆ ಬಳಸುತ್ತೇವೆ ಮತ್ತು ಮಾರಾಟ ಮಾಡುತ್ತೇವೆ. ಇದರಿಂದ ವರ್ಷಕ್ಕೆ ಮೂರು ಲಕ್ಷ ಆದಾಯ ಬರುತ್ತದೆ” ಎಂದು ತಿಳಿಸಿದರು.

ಗೀರ್ ಆಕಳುಗಳ ಮೂತ್ರ ಸಂಗ್ರಹಿಸಿ, ಅದರ ಮೂಲಕ ಭಟ್ಟಿ ಇಳಿಸುವಿಕೆ ತಂತ್ರಜ್ಞಾನದ ಮೂಲಕ ಗೋಮೂತ್ರ ಅರ್ಕ ತಯಾರಿಸುತ್ತೇವೆ. ಪ್ರತಿ 20 ಲೀಟರ್ ಗೋಮೂತ್ರದಿಂದ 12 ಗಂಟೆಗಳ ನಂತರ 5 ಲೀ ಗೋಮೂತ್ರ ಅರ್ಕ ತಯಾರಿಸುತ್ತೇವೆ. ಅರ್ಧ ಲೀಟರ್‌ಗೆ 150 ರಂತೆ ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು.
ರೈತ ಕಲ್ಲಪ್ಪನವರು, ಪ್ರಧಾನಮಂತ್ರಿ 10000 ಎಫ್ ಪಿ ಓ ಯೋಜನೆ ಅಡಿ, ಶೇಗುಣಸಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಿ ಅದರ ಮೂಲಕ ರೈತರ ಉತ್ಪನ್ನಗಳಾದ ಹೆಸರು ಉದ್ದು, ಕಡಲೆ, ಗೋಧಿ ಖರೀದಿಸಿ, ರೈತರಿಗೆ ಸರಿಯಾದ ಬೆಲೆ ನೀಡುತ್ತಿದ್ದಾರೆ. ಒಟ್ಟಾರೆ ರೈತರಿಂದ 80 ಲಕ್ಷ ರೂ. ಉತ್ಪನ್ನ ಖರೀದಿಸಿ, ಜೊತೆಗೆ ರೈತರಿಗೆ ಬೇಕಾಗುವ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಸಹಿತ ಕಡಿಮೆ ಬೆಲೆಗೆ ಎಫ್ ಪಿ ಓ ಸದಸ್ಯತ್ವ ಇರುವ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ 1100 ಸದಸ್ಯರಿದ್ದು ಸರ್ಕಾರದಿಂದ 15 ಲಕ್ಷ ರೂಪಾಯಿಯಷ್ಟು ಸಹಾಯಧನವನ್ನೂ ಪಡೆಯುತ್ತಿದ್ದಾರೆ.
ಶುದ್ದ ಕುಸುಬಿ ಎಣ್ಣೆ ಮತ್ತು ಶೇಂಗಾ ಎಣ್ಣೆ ತಯಾರಿಕೆ
ಈ ಸಾವಯವ ಕೃಷಿಕರು ಅವರ ತೋಟದಲ್ಲಿಯೇ ಬೀಜದಿಂದ ಎಣ್ಣೆ ತೆಗೆಯುವ ಯಂತ್ರ ಅಳವಡಿಸಿದ್ದು, ಅದರ ಮೂಲಕ ರೈತರಿಂದ ಖರೀದಿಸಿದ ಶೇಂಗಾ ಮತ್ತು ಕುಸುಬಿ ಬೀಜದಿಂದ ಎಣ್ಣೆ ತೆಗೆದು ಗ್ರಾಹಕರ ಬೇಡಿಕೆ ತಕ್ಕಂತೆ 1ಲೀ ಮತ್ತು 5ಲೀ ಬಾಟಲ್ ಗಳಲ್ಲಿ ಪ್ಯಾಕ್ ಮಾಡಿ ಲೀ ಗೆ 250-350 ರವರೆಗೆ ಮಾರಾಟ ಮಾಡುತ್ತಾರೆ. ಈ ಉಪ ಕಸುಬಿನಿಂದ ಪ್ರತಿ ತಿಂಗಳು 100 ಲೀ ಎಣ್ಣೆ ದೊರೆಯುತ್ತಿದ್ದು, ರೂ.36000 ವಾರ್ಷಿಕ ಉತ್ಪನ್ನ ದೊರೆಯುತ್ತದೆ. ಜೊತೆಗೆ ದನಗಳಿಗೆ ಶೇಂಗಾ ಮತ್ತು ಹಿಂಡಿ ದೊರೆಯುತ್ತದೆ. ಅಲ್ಲದೇ ಆರೋಗ್ಯಯುತ ಎಣ್ಣೆ ನಮಗೆ ಸಿಗುತ್ತದೆ. ರೈತರು ಈ ರೀತಿಯಾಗಿ ತಂತ್ರಜ್ಞಾನ ಬಳಸಿಕೊಂಡು ಲಾಭ ಗಳಿಸಬಹುದಾಗಿದೆ ಎಂದು ರೈತ ಕಲ್ಲಪ್ಪನವರು ಮಾಹಿತಿ ನೀಡಿದರು.

ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಅದರ ಮೂಲಕ ತಮ್ಮ ತೋಟದಲ್ಲಿಯೇ ಸಾವಯವ ಬೆಲ್ಲ ತಯಾರಿಕಾ ಘಟಕ ತಯಾರಿಸಿ ಮಾರಾಟ ಮಾಡುತ್ತಾರೆ. ಸಾವಯವ ಬೆಲ್ಲ ತಯಾರಿಕೆಯಿಂದ ವಾರ್ಷಿಕವಾಗಿ ಉತ್ತಮ ಹಣ ಕೂಡ ಗಳಿಸುತ್ತಿದ್ದಾರೆ. ಕಬ್ಬು ನಾಟಿ ಮಾಡಿ 12 ತಿಂಗಳ ನಂತರ ಕಟಾವು ಮಾಡಿ ಸಾವಯವ ಬೆಲ್ಲವನ್ನು ತಯಾರಿಸುತ್ತಿದ್ದಾರೆ.
“ನಮ್ಮ ತೋಟದಲ್ಲಿ ಒಂದು ಗಾಣದ ಮನೆ ನಿರ್ಮಿಸಿಕೊಂಡಿದ್ದು ಇಲ್ಲಿ ಸ್ವಚ್ಚತೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಸ್ಟೀಲ್‌ನಲ್ಲಿಯೇ ತಯಾರಿಸಿದ ಗಂಗಾಳ, ಕಬ್ಬಿನ ಹಾಲು ಸಂಗ್ರಹಣಾ ಟ್ಯಾಂಕ್, ಬೆಲ್ಲ ತಂಪಾಗಿಸುವ ಡೋಣಿ ಇದ್ದ, ಗ್ರಾಹಕರ ಬೇಡಿಕೆಗೆ ತಕ್ಕಂತೆ 1 ಕೆಜಿ, ಅರ್ಧ ಕೆಜಿ ಹೀಗೆ ವಿವಿಧ ತೂಕದಲ್ಲಿ ಬೆಲ್ಲ ತಯಾರಿಸುತ್ತೇವೆ. ಜೊತೆಗೆ ಬೆಲ್ಲದ ಪುಡಿಯನ್ನು ಸಹ ತಯಾರಿಸುತ್ತೇವೆ” ಎನ್ನುತ್ತಾರೆ ರೈತ ಕಲ್ಲಪ್ಪ.

ಈ ಬೆಲ್ಲ ತಯಾರಿಕೆಗೆ ಶೇಂಗಾ ಎಣ್ಣೆ, ಬೆಂಡಿ ಗಿಡದ ಪುಡಿ ಮಾತ್ರ ಬಳಸಿ ಗ್ರಾಹಕರಿಗೆ ವಿಷಮುಕ್ತ ಬೆಲ್ಲ ನೀಡುತ್ತಿರುವ ಇವರು, ವರ್ಷದ 12 ತಿಂಗಳು ಬೆಲ್ಲ ತಯಾರಿಗೆ ಕ್ರಿಯೆ ನಡೆಯುತ್ತಿದ್ದು ತಿಂಗಳಿಗೆ ಸುಮಾರು 15 ಟನ್ ಬೆಲ್ಲ ತಯಾರಿಸುತ್ತಿದ್ದಾರೆ.
ಸಾವಯವ ಗೊಬ್ಬರ ತಯಾರಿಕೆ
1 ಏಕರೆಗೆ 5 ಟ್ರೈಲರ್ ತಿಪ್ಪೆ ಗೊಬ್ಬರ ಹಾಕಿ ಕೃಷಿ ಭೂಮಿ ಸಿದ್ಧಪಡಿಸಿಕೊಳ್ಳುವ ಕಲ್ಲಪ್ಪನವರು, “1 ಕ್ವಿಂಟಾಲ್ ಬೇವಿನ ಹಿಂಡಿ, 5 ಕ್ವಿಂಟಾಲ್ ಅವರ ತೋಟದಲ್ಲಿಯೇ ತಯಾರಿಸಿದ್ದ ಎರೆಹುಳು ಗೊಬ್ಬರ ಜೊತೆಗೆ ಎರೆಭೂಮಿ ಇರುವ ಕಾರಣ 5 ಕ್ವಿಂಟಾಲ್ ಜಿಪ್ಸಮ್ ಸೇರಿಸಿ 1 ಎಕರೆಗೆ 2ಟನ್ ಬೀಜವನ್ನು ಲಾವಣಿ ಮಾಡುತ್ತೇವೆ. ಕಬ್ಬು ಲಾವಣೆ ಮಾಡುವಾಗ 2 ಗಣಿಕೆ ಒಂದು ಕಬ್ಬನ್ನು ಸಾಲಿನಿಂದ ಸಾಲಿಗೆ 4 ಫೂಟ್ ಮತ್ತು ಸಸಿಯಿಂದ ಸಸಿಗೆ 1.5 ಫೂಟ್ ಅಂತರದಲ್ಲಿ ಲಾವಣಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಕಬ್ಬು ನಾಟಿ ಮಾಡಿದ 50ನೇ ದಿನಕ್ಕೆ ಮತ್ತು 60 ನೇ ದಿನಕ್ಕೆ ಕ್ರಮವಾಗಿ ಎರೆ ಜಲ ಮತ್ತು ಗೋ ಕೃಪಾಮೃತ್ ಅನ್ನು ಸಿಂಪಡಣೆ ಮಾಡುತ್ತೇವೆ. 65ನೇ ದಿನಕ್ಕೆ ಸೆಣಬು ಬೆಳೆಯನ್ನು ಅಲ್ಲಿಯೇ ಹೊಲದಲ್ಲಿ ಮುರಿದು ಹಸಿರೆಲೆ ಗೊಬ್ಬರವಾಗಿ ನೀಡುವುದಾಗಿ ತಿಳಿಸಿದರು.

ಕಬ್ಬು ನಾಟಿ ಮಾಡಿದ 75ನೇ ದಿನಕ್ಕೆ ತೋಟದಲ್ಲಿಯೇ ತಯಾರಿಸಿದ ಘನ ಜೀವಾಮೃತವನ್ನೂ ಎಕರೆಗೆ 2 ಕ್ವಿಂಟಾಲ್ ರಂತೆ ಭೂಮಿಗೆ ನೀಡುತ್ತಾರೆ. ಕಬ್ಬು ನಾಟಿ ಮಾಡಿದ 80ನೇ ದಿನಕ್ಕೆ ಮೀನೆಣ್ಣೆ ಟಾನಿಕ್ (ಮೀನು ಮತ್ತು ಬೆಲ್ಲದ ಮಿಶ್ರಣ) ಸಿಂಪರಣೆ ಮಾಡುತ್ತಾರೆ. ಹೀಗೆ ಪ್ರತಿ 15 ದಿನಕ್ಕೊಮ್ಮೆ ಗೋ ಕೃಪಾಮೃತ್ ಮತ್ತು ಜೀವಮೃತವನ್ನು 8 ತಿಂಗಳುಗಳ ವರೆಗೆ ನೀರಿನ ಮೂಲಕ ಬೆಳೆಗೆ ನೀಡುತ್ತಾ ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದಾರೆ.
ಪ್ರಶಸ್ತಿಗಳ ಸರದಾರರಾಗಿರುವ ರೈತ ಕಲ್ಲಪ್ಪನವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೆಹಲಿಯ ಮಹೀಂದ್ರಾ ಕಂಪನಿಯು ಕೃಷಿ ಸಾಮ್ರಾಟ್ ಸಮ್ಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯದಲ್ಲಿ ಯಡಿಯ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇವರ ಕೃಷಿ ಭೂಮಿಯಲ್ಲಿ ಅನ್ನದಾತನ ಅಂಗಳದಲ್ಲಿ ಸಾವಯವ ಸಂವಾದ ಕಾರ್ಯಕ್ರಮವನ್ನು ಕೂಡ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಮುಂದಿನ ವರ್ಷ 600 ಕೋಟಿ ವೆಚ್ಚದ ಅನುಭವ ಮಂಟಪ ಲೋಕಾರ್ಪಣೆ: ಸಿಎಂ ಸಿದ್ದರಾಮಯ್ಯ ಭರವಸೆ
ಚೀನಾ ದೇಶ ಸೇರಿದಂತೆ ಮಹಾರಾಷ್ಟ್ರ ಗುಜರಾತ್ ರಾಜ್ಯ ಪ್ರವಾಸ ಮಾಡಿರುವ ಇವರು, ಕೃಷಿ ಪಾಂಡಿತ್ಯ ಪಡೆದಿದ್ದಲ್ಲದೇ, ಬೇರೆ ಬೇರೆ ರಾಜ್ಯದ ರೈತರಿಗೆ ಸಾವಯವ ಕೃಷಿಯ ಕುರಿತು ಕೂಡ ಮಾಹಿತಿ ನೀಡುತ್ತಾ ಬಂದಿದ್ದು, ಸಾವಯವ ಕೃಷಿಯನ್ನೇ ಮುಂದುವರಿಸುವಂತೆ ಪ್ರೇರಣೆ ನೀಡುತ್ತಿದ್ದಾರೆ.
“ನಮ್ಮ ಹಿರಿಯರು ಭೂಮಿಯನ್ನು ಫಲವತತ್ತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ರಾಸಾಯನಿಕ ಗೊಬ್ಬರದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವುದಲ್ಲದೆ ರೈತರು ಉತ್ತಮ ಇಳುವರಿ ಪಡೆಯಲಾಗುತ್ತಿಲ್ಲ. ರೈತರು ಸಾವಯವ ಕೃಷಿಯ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಹಾಗೂ ರೈತರು ರೈತನಾಗಿರದೆ ಉದ್ಯೋಗಪತಿಯಾಗಬೇಕು” ಎನ್ನುತ್ತಾರೆ ಪ್ರಗತಿಪರ ಕೃಷಿಕ ಕಲ್ಲಪ್ಪ ಗುರುಪಾದಪ್ಪ ಯಲ್ಲಡಗಿ.



ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು