ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಸಾಗುವಳಿ ಭೂಮಿ ಹಕ್ಕು ಪತ್ರಕ್ಕಾಗಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 25ನೇ ದಿನ ಪೂರೈಸಿದ್ದು, ರೈತ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ರಾಣಿ ಚನ್ನಮ್ಮ ವೃತ್ತದಲ್ಲಿ ಉರುಳು ಸೇವೆ ಮಾಡಿ ಅಹೋರಾತ್ರಿ ಸತ್ಯಾಗ್ರಹ ನಡೆದಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ “ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಸರ್ಕಾರದ ಕರ್ತವ್ಯ. ಅದು ಆಗದಿದ್ದಾಗ, ಇನಾಮ್, ಬಗರಹುಕುಂ, ಶಿಂಧಿ ವನ ಅಥವಾ ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುವುದು ನಮ್ಮ ಆದ್ಯತೆ. ದೇಶದ ಆಹಾರ ಭದ್ರತೆಗಾಗಿ ನಾವು ಕೃಷಿ ಮಾಡುತ್ತಿದ್ದೇವೆ ಎಂಬುದನ್ನು ಸರ್ಕಾರ ಗಮನಿಸಬೇಕು”

“ಆಡ್ವರ್ಸ್ ಪೊಸೇಷನ್ ಆ್ಯಕ್ಟ್’ ಅಡಿ 12 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರೆ ಅಥವಾ ಒಂದೇ ಸ್ಥಳ ಅನುಭವಿಸುತ್ತಿದ್ದರೆ, ಅದು ಅವರ ಪಾಲಾಗುತ್ತದೆ ಎಂದು ಕಾನೂನು ಹೇಳುತ್ತದೆ. ಅದರ ಪ್ರಕಾರವೇ ರೈತರ ಹೆಸರಿನಲ್ಲಿ ಪಹಣಿ ಆಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಫೆ.12ರಂದು ಸವದತ್ತಿ ಯಲ್ಲಮ್ಮನ ಜಾತ್ರೆಯ ಮೂಲ ಸೌಕರ್ಯಕ್ಕೆ ಕ್ರಮ:ಎಚ್ ಕೆ ಪಾಟೀಲ್
ರೈತ ಮುಖಂಡರಾದ ಕಿಶೋರ ಮಿಠಾರಿ,ಚೂನಪ್ಪ ಪೂಜಾರಿ, ಪ್ರಕಾಶ ನಾಯ್ಕ, ಬಸಪ್ಪ ಬಿಜೂರ, ನಿಂಗಪ್ಪ ದಿವಟಗಿ, ನಾಗರತ್ನ ಪಾಟೀಲ, ರವಿ ಕಂಬಳಿ, ಆಸ್ಮಾ ಜೂಟದಾರ,ಸೇರಿದಂತೆ ಅನೇಕ ರೈತ ಹೋರಾಟಗಾರರು,ಮಹಿಳೆಯರು ಇದ್ದರು