ರೈತರ ಸ್ವಾಭಿಮಾನ ಮತ್ತು ರೈತ ಹೋರಾಟದ ಇತಿಹಾಸವನ್ನು ಸ್ಮರಿಸಲು ಧಾರವಾಡದ ರೈತ ಹುತಾತ್ಮ ದಿನಾಚಾರಣೆ ಆಯೋಜಿಸಲಾಗಿದೆ. ರೈತರ ಸಮಾವೇಶದಲ್ಲಿ ನಾಡಿನ ರೈತರು ಭಾಗಿಯಾಗಬೇಕು ಎಂದು ರೈತಸಂಘದ ಮುಖಂಡ ಚನ್ನಪ್ಪ ಗಣಾಚಾರಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನರಗುಂದ-ನವಲಗುಂದದಿಂದ ಆರಂಭವಾದ ರೈತ ಚಳುವಳಿ ರಾಜ್ಯಾದ್ಯಾಂತ ಪಸರಿಸಿತು. ನೂರಾರು ರೈತರು ರೈತ ವಿರೋಧಿ ಸರ್ಕಾರಗಳ ಆಡಳಿತ ವ್ಯವಸ್ಥೆ ಧಿಕ್ಕರಿಸಿ ಸಿಡಿದೆದ್ದಿದ್ದರು. ಹಲವರು ತನ್ನ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಸ್ಮರಣೆಗಾಗಿ ಜುಲೈ 21ರಂದು ಧಾರವಾಡದಲ್ಲಿ43ನೇ ರೈತ ಹುತಾತ್ಮ ದಿನಾಚಾರಣೆಗೆ ನಡೆಯಲಿದೆ” ಎಂದು ತಿಳಿಸಿದ್ದಾರೆ.
“ರಾಜಕಾರಣಿಗಳ ಕುಟಿಲೋಪಾಯಗಳಿಂದ ಜನಪರ ಸಂಘಟನೆಗಳು ಒಡೆದು ಛಿದ್ರಗೊಂಡಿವೆ. ಹೋರಾಟದ ಇತಿಹಾಸವನ್ನು ಸ್ಮರಿಸುತ್ತ ವೈಚಾರಿಕ ಹೋರಾಟದ ಹಾದಿಯನ್ನು ಕ್ರಮಿಸಬೇಕಾಗಿದೆ. ಆ ದಿಕ್ಕಿನಲ್ಲಿ ರೈತರನ್ನು ಜಾಗೃತಗೊಳಿಸಿ ಹೋರಾಟದ ಕಿಚ್ಚು ತುಂಬುವುದು ಸಮಾವೇಶದ ಉದ್ದೇಶವಾಗಿದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಮೊಖಾಶಿ, ರಾಜ್ಯ ಉಪಾಧ್ಯಕ್ಷ ಶಿವನಗೌಡ ಪಾಟಿಲ್, ಶಿವಪುತ್ರಪ್ಪ ಜಕಬಾಳ, ಶಿವನಗೌಡ ಪಾಟಿಲ, ಬಾಳಪ್ಪ ಪಾಟಿಲ, ವೈಜು ಲೂಮಾಚಿ, ಬಸವನಗೌಡ ಪಾಟಿಲ ಉಪಸ್ಥಿತರಿದ್ಧರು.