ರಾಜ್ಯದಲ್ಲಿ ಶ್ರೀಗಂಧದ ಕೃಷಿ ಪ್ರದೇಶ ವಿಸ್ತರಣೆಯಾಗುತ್ತಿದೆ. ಜೊತೆಗೆ ಬೆಳೆದು ನಿಂತ ಮರಗಳನ್ನು ಕದ್ದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ, ಈ ಪ್ರಕರಣಗಳು ರೈತರಲ್ಲಿ ಜೀವಭಯಕ್ಕೂ ಕಾರಣವಾಗಿದ್ದು, ಬೆಳೆದ ಶ್ರೀಗಂಧ ಮರಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಬೆಳಗಾವಿ ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ.
ಜಮೀನಿನಲ್ಲಿ 400 ರಿಂದ 500ಮರಗಳ ಪೈಕಿ ವಾರ್ಷಿಕ 15ರಿಂದ 20ಮರಗಳು ಕಳ್ಳತನವಾಗುತ್ತಿವೆ. 8 ರಿಂದ 10 ವರ್ಷ ದೊಡ್ಡದಾಗಿ ಬೆಳೆಯುತ್ತಿದ್ದಂತೆ ರಾತೋರಾತ್ರಿ ಕಳ್ಳರು ಮರಗಳನ್ನು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಮರ ರಕ್ಷಣೆ ಮಾಡುವ ರೈತರಿಗೆ ಜೀವಭಯವೂ ಎದುರಾಗುತ್ತಿದೆ. ಬೆಳಗಾವಿ, ಖಾನಾಪುರ ತಾಲೂಕಿನ ಗ್ರಾಮಗಳನ್ನು ಸುತ್ತುವರಿದಿರುವ ಕೆಂಪು ಮಣ್ಣಿನ ಭೂಮಿ ಬಿಳಿ ಶ್ರೀಗಂಧದ ಮರಗಳ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿದೆ.
ಕೃಷಿ ಭೂಮಿಯಲ್ಲಿ ವಾಣಿಜ್ಯ ಶ್ರೀಗಂಧದ ಜತೆಗೆ ನೈಸರ್ಗಿಕವಾಗಿಯೂ ಶ್ರೀಗಂಧ ಬೆಳೆಯಲಾಗುತ್ತದೆ. ಸರ್ಕಾರವು ಶ್ರೀಗಂಧ ಸಸಿ ವಿತರಿಸುತ್ತಿರುವುದರಿಂದ ಈ ಭಾಗದ ಅನೇಕ ರೈತರು ಅರಣ್ಯ ಇಲಾಖೆ ಸಹಾಯದಿಂದ ಜಮೀನಿನಲ್ಲಿ ಶ್ರೀಗಂಧದ ಸಸಿ ನೆಡಲು ಪ್ರಾರಂಭಿಸಿದ್ದಾರೆ. ಆದರೆ, ಶ್ರೀಗಂಧದ ಮರಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವುದು ಅವರ ದೂರು. ಬೆಳಗಾವಿ ಒಂದು ಉದಾಹರಣೆ ಮಾತ್ರ. ರಾಜ್ಯಾದ್ಯಂತ ಇದೇ ಪರಿಸ್ಥಿತಿ ಇದೆ.
ಬೆಳೆಗಾರರು 200ರಿಂದ 500 ಶ್ರೀಗಂಧ ಮರಗಳ ರಕ್ಷಣೆಗೆ 5ರಿಂದ 8ನಾಯಿ ಬಳಕೆ ಮಾಡುತ್ತಿದ್ದಾರೆ, ಮರಗಳ ರಕ್ಷಣೆಗಾಗಿ ಮಾಸಿಕ 10ಸಾವಿರ ರೂ. ವರೆಗೂ ವೆಚ್ಚ ಮಾಡುತ್ತಿದ್ದಾರೆ. ಗಡಿಭಾಗದಲ್ಲಿ ಶ್ರೀಗಂಧ ಕಳ್ಳರ ದಂಡು ಸಕ್ರಿಯವಾಗಿದ್ದು, ಉತ್ತಮವಾಗಿ ಬೆಳೆದಿರುವ ಶ್ರೀಗಂಧದ ಮರ ಗುರುತಿಸಿ ಕಳ್ಳತನ ಮಾಡುತ್ತಿದ್ದಾರೆ. ಮರ ಕತ್ತರಿಸುವ ಶಬ್ದ ಕೇಳಿಸದಂತೆ ಅತ್ಯಾಧುನಿಕ ಕಟಾವು ಯಂತ್ರ ಬಳಸುತ್ತಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಒಂದೇ ವಾರದಲ್ಲಿ 50ಕ್ಕೂ ಹೆಚ್ಚು ಮರ ಕಟಾವು ಮಾಡಿಕೊಂಡು ಹೋಗಿದ್ದಾರೆ ಎಂದು ಶ್ರೀಗಂಧ ಬೆಳೆಗಾರರು ಆರೋಪಿಸುತ್ತಿದ್ದಾರೆ.
ರಾಜ್ಯಾದ್ಯಂತ ಐದು ವರ್ಷಗಳ ಹಿಂದೆ 5 ಸಾವಿರ ಹೆಕ್ಟೇರ್ನಷ್ಟಿದ್ದ ಶ್ರೀಗಂಧದ ಮರಗಳು ಪ್ರಸ್ತುತ ಅಂದಾಜು 10 ಸಾವಿರ ಹೆಕ್ಟೇರ್ನಲ್ಲಿ 35ರಿಂದ 40ಲಕ್ಷ ಶ್ರೀಗಂಧದ ಮರಗಳಿಗೆ ವಿಸ್ತಾರವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆದರೆ, ಯಾರೊಬ್ಬರ ಬಂಧನವೂ ಆಗಿಲ್ಲ. ಕಳ್ಳತನವಾದ ಶ್ರೀಗಂಧ ಮರಗಳು ಪತ್ತೆಯಾಗಿಲ್ಲ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಜಮೀನುಗಳಲ್ಲಿ ರೈತರು ಬೆಳೆದಿರುವ ಶ್ರೀಗಂಧ ಮರಗಳ ಕಳ್ಳತನವಾಗುತ್ತಿರುವ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು. ಎಲ್ಲೆಲ್ಲಿ ಶ್ರೀಗಂಧ ಮರ ಬೆಳೆಯಲಾಗಿದೆಯೋ ಅಲ್ಲಿ ರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.