ಕಳೆದೊಂದು ವಾರದಿಂದ ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಕೂದಲೆಳೆಯಲ್ಲಿ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊಸಟ್ಟಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಗಾಳಿಯೂ ಬೀಸುತ್ತಿದೆ. ಪರಿಣಾಮ, ಹೊಸಟ್ಟಿ ಗ್ರಾಮದಲ್ಲಿ ನಿಂಗಪ್ಪ ಕಮತಗಿ ಎಂಬವರ ಮನೆ ಕುಸಿದು ಬಿದ್ದಿದೆ. ಮೊದಲಿಗೆ ಎರಡು ಇಟ್ಟಿಗೆಗಳು ಬಿದ್ದಿದ್ದು, ಅದನ್ನು ಕಂಡ ಮನೆಯಲ್ಲಿದ್ದವರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕ್ಷಣಾರ್ಧದಲ್ಲಿ ಇಡೀ ಮನೆ ಕುಸಿದು ಬಿದ್ದಿದೆ. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಕಳೆದುಕೊಂಡಿರುವ 11 ಮಂದಿ ಇರುವ ಕುಟುಂಬ ಈಗ ನಿರ್ಗತಿಕ ಪರಿಸ್ಥಿತಿಯಲ್ಲಿದೆ. ಸೂರಿಲ್ಲದೆ, ಬೀದಿ ಪಾಲಾಗಿದೆ. ಗುಡಿಸಲು ಕಟ್ಟಿಕೊಂಡು ಮಳೆಯ ನಡುವೆ ವಾಸಿಸುವ ಪರಿಸ್ಥಿತಿ ಎದುರಾಗಿದೆ. ಮಳೆಯಿಂದ ಮನೆ ಕಳೆದುಕೊಂಡಿದ್ದು, ಸರ್ಕಾರದಿಂದ ಪರಿಹಾರ ಸಿಕ್ಕರೆ, ಮತ್ತೊಂದು ಸೂರು ಕಟ್ಟಿಕೊಳ್ಳುತ್ತೇವೆಂದು ಕುಟುಂಬ ನಿರೀಕ್ಷಿಸುತ್ತಿದೆ.