ಬುಧವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ (ಬಿಸಿಸಿ) ಸಾಮಾನ್ಯ ಸಭೆಯಲ್ಲಿ ಮತ್ತೆ ಕನ್ನಡ-ಮರಾಠಿ ವಿವಾದ ಎದ್ದಿದೆ. ಸಭೆಯ ಆರಂಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮೂವರು ಸದಸ್ಯರು ಬಿಸಿಸಿಯ ಅಜೆಂಡಾ ಪ್ರತಿ ಮತ್ತು ಇತರ ದಾಖಲೆಗಳನ್ನು ಮರಾಠಿಯಲ್ಲಿ ನೀಡಬೇಕು ಎಂದು ಒತ್ತಾಯಿಸಿ ಸಭೆಯಲ್ಲಿಯೇ ಧರಣಿ ನಡೆಸಿದ್ದಾರೆ.
ಕಳೆದ ಸಭೆಯಲ್ಲಿ ಮೇಯರ್ ಅವರು ಮರಾಠಿಯಲ್ಲಿ ದಾಖಲೆಗಳನ್ನು ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ ಮರಾಠಿ ಭಾಷೆಯಲ್ಲಿ ಅಜೆಂಡಾ ಪ್ರತಿ ನೀಡಿಲ್ಲವೆಂದು ಎಂಇಎಸ್ ಸದಸ್ಯರು ಆರೋಪಿಸಿದ್ದಾರೆ.
ಬೆಳಗಾವಿ (ದಕ್ಷಿಣ) ಶಾಸಕ ಅಭಯ ಪಾಟೀಲ ಸೇರಿದಂತೆ ಆಡಳಿತಾರೂಢ ಬಿಜೆಪಿ ಸದಸ್ಯರು ಎಂಇಎಸ್ ಸದಸ್ಯರ ವರ್ತನೆಯನ್ನು ಖಂಡಿಸಿದ್ದಾರೆ. ”ಸಭೆಯಲ್ಲಿ ಧರಣಿ ನಡೆಸುವ ಮೂಲಕ ಎಂಇಎಸ್ ಸದಸ್ಯರು ಮೇಯರ್‌ಗೆ ಅವಮಾನ ಮಾಡಿದ್ದಾರೆ. ಸಭೆಯು ತರಕಾರಿ ಮಾರುಕಟ್ಟೆ ಅಲ್ಲ. ಧರಣಿ ಕುಳಿತಿರುವ ಸದಸ್ಯರು ಕೇವಲ ರಾಜಕೀಯ ಮಾಡಲು ಬಯಸುತ್ತಿದ್ದಾರೆ. ಅವರಿಗೂ ನಗರದ ಅಭಿವೃದ್ಧಿ ವಿಷಯಗಳಿಗೂ ಸಂಬಂಧವಿಲ್ಲ” ಎಂದು ಕಿಡಿಕಾರಿದ್ದಾರೆ.
“ಆಡಳಿತ ಭಾಷೆ ಹೊರತುಪಡಿಸಿ ಇತರ ಭಾಷೆಗಳಲ್ಲಿ ದಾಖಲೆಗಳನ್ನು ನೀಡಲು ಸಾಧ್ಯವೇ ಎಂಬುದನ್ನು ಸ್ಪಷ್ಟಪಡಿಸಬೇಕು. ಕರ್ನಾಟಕ ಮುನ್ಸಿಪಲ್ ಕಾಯ್ದೆಯಲ್ಲಿ ಅವಕಾಶವಿದ್ದರೆ ಮರಾಠಿಯಲ್ಲಿ ದಾಖಲೆಗಳನ್ನು ನೀಡಬೆಕು” ಎಂದು ಅಧಿಕಾರಿಗಳಿಗೆ ಶಾಸಕ ಪಾಟೀಲ್ ಸೂಚಿಸಿದ್ದಾರೆ.
ಕಾನೂನು ಅಧಿಕಾರಿ ಯು.ಡಿ.ಮಾಧುಸ್ವಾಮಿ ಮಾತನಾಡಿ, “ಕರ್ನಾಟಕ ಮುನ್ಸಿಪಲ್ ಕಾಯ್ದೆಯಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ. ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ದಾಖಲೆಗಳನ್ನು ಒದಗಿಸಲು ಕಾಯ್ದೆಯಲ್ಲಿ ಅವಕಾಶವಿದೆ” ಎಂದು ಹೇಳಿದ್ದಾರೆ.
“ಬಿಸಿಸಿಯಲ್ಲಿ ಭಾಷಾಂತರಕಾರರೊಬ್ಬರು ನಿವೃತ್ತಿಯಾಗಿರುವುದರಿಂದ ಕನ್ನಡದಲ್ಲಿಯೇ ಸಭೆಯ ನೋಟಿಸ್ ನೀಡಿದ್ದೇವೆ” ಎಂದು ಮೇಯರ್ ಶೋಭಾ ಸೋಮನಾಚೆ ಅವರು ಮನವರಿಕೆ ಮಾಡಿದ ನಂತರ ಎಂಇಎಸ್ ಸದಸ್ಯರು ಧರಣಿ ಹಿಂಪಡೆದರು. ಮುಂದಿನ ಸಭೆಯಿಂದ ಅವರು ಮರಾಠಿಯಲ್ಲಿ ನೋಟಿಸ್ ಮತ್ತು ಅಜೆಂಡಾ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದರು.