ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಹಾಲು ಸೇವಿಸಿ 38 ಶಾಲಾ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ.
ಹಾಲು ಸೇವಿಸಿದಂತ 38 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಶಾಲಾ ಮಕ್ಕಳನ್ನು ಕೂಡಲೇ ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಬಿಇಒ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಘಟನೆಯ ಮಾಹಿತಿ ಪಡೆದಿದ್ದಾರೆ. ಬಿಸಿ ಹಾಲಿನಲ್ಲಿ ಹಲ್ಲಿ ಬಿದ್ದಿದ್ದೇ ಘಟನೆಗೆ ಕಾರಣ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮ ಸೇರಿ ಒಟ್ಟು 94 ವಿದ್ಯಾರ್ಥಿಗಳಿಗೆ ಹಾಲು ನೀಡಲಾಗಿತ್ತು. ಬಳಿಕ ಹಲ್ಲಿ ಬಿದ್ದಿದ್ದು ಗೊತ್ತಾಯಿತು. ಕೆಲವು ನಿಮಿಷಗಳ ಬಳಿಕ 10 ಮಕ್ಕಳಿಗೆ ವಾಂತಿ ಶುರುವಾಯಿತು. ಅವರಿಗೆ ನೀರು ಕುಡಿಸಿ ಸಂತೈಸಿ ಪಾಲಕರನ್ನು ಕರೆಸಲಾಯಿತು. ಅಷ್ಟರೊಳಗೆ ಉಳಿದ 28 ಮಕ್ಕಳಿಗೂ ವಾಂತಿಯ ಲಕ್ಷಣಗಳು ಶುರುವಾದವು. ಇದರಿಂದ ಗಾಬರಿಗೊಂಡ ಪಾಲಕರು ಶಾಲೆಗಳತ್ತ ಧಾವಿಸಿದರು. ಶಿಕ್ಷಕರು ಹಾಗೂ ಪಾಲಕರು ಸೇರಿ ಎರಡು ಆಂಬುಲೆನ್ಸ್ ಹಾಗೂ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಹುಕ್ಕೇರಿ ಹಾಗೂ ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದರು.
ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ, ವಿದ್ಯಾರ್ಥಿಗಳಿಗೆ ಕುಡಿಯಲು ನೀಡಿದ ಹಾಲಿನಲ್ಲಿ ಹಲ್ಲಿ ಬಿದ್ದಿದ್ದು ಖಚಿತವಾಗಿದೆ. ವಾಂತಿ ಭೇದಿ ಕಾಣಿಸಿಕೊಂಡ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲಿ ಹೇಗೆ, ಯಾವಾಗ ಬಿದ್ದಿತು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಮಾದ್ಯಮದವರಿಗೆ ಮಾಹಿತಿ ನೀಡಿದ್ದಾರೆ.