ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರನ್ನು ಇನ್ಮುಂದೆ ಲಿಂಗಾಯತ ಧರ್ಮದ ಶಾಸಕನೆಂದು ಕರೆಯಬಾರದು ಎಂದು ಯತ್ನಾಳ್ ವಿರುದ್ಧ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬೀದರ ಬಸವಧರ್ಮ ಪೀಠದ ಸತ್ಯಕ್ಕ ಮಾತಾಜಿ ತಿಳಿಸಿದರು.
ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಲಿಂಗಾಯತ ಸಮುದಾಯ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಭಾಪತಿಗಳಿಗೆ ಮನವಿ ಸಲ್ಲಿಸಿದರು. ನಂತರ ಕನ್ನಡ ಸಾಹಿತ್ಯ ಭವನದಲ್ಲಿನ ಸಮಾವೇಶದ ನಂತರ ಪ್ರತಿಭಟನಕಾರರು, ಯತ್ನಾಳ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ಮತ್ತು ಲಿಂಗಾಯತ ಮುಖಂಡರ ನಡುವೆ ಪರಸ್ಪರರ ಮಧ್ಯೆ ವಾಗ್ವಾದ, ತಳ್ಳಾಟ-ನೂಕಾಟ ನಡೆಯಿತು. ಪಟ್ಟು ಸಡಿಲಿಸದ ಕಾರ್ಯಕರ್ತರು ಯತ್ನಾಳ್ ಪ್ರತಿಕೃತಿ ಮತ್ತು ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಸವಣ್ಣನವರು ಹೊಳೆ ಹಾರಿದ್ದನ್ನು ಬಸನಗೌಡ ಪಾಟೀಲ ಯತ್ನಾಳ ನೋಡಿದ್ದಾರೆಯೇ? ಬಸವಣ್ಣನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡುವ ಅವರು, ಇದಕ್ಕೆ ಪುರಾವೆ ತೆಗೆದುಕೊಂಡು ಬರಬೇಕು. ಇಲ್ಲದಿದ್ದರೆ ತಮ್ಮ ನಾಲಿಗೆ ಕತ್ತರಿಸಿಕೊಳ್ಳಬೇಕು. ಯತ್ನಾಳ್ ಮನಬಂದಂತೆ ಮಾತನಾಡುವುದನ್ನು ಬಿಟ್ಟು, ವಚನ ಸಾಹಿತ್ಯ ಓದಿ ಬುದ್ದಿ ಕಲಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಯತ ಮುಖಂಡ ಶಂಕರ ಗುಡಾಸ್ ಮಾತನಾಡಿ, ಶರಣರ ನಾಡಿನಲ್ಲಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಲಿಂಗಾಯತ ಧರ್ಮದ ಸಂಸ್ಕಾರ ಮತ್ತು ವಚನ ಸಾಹಿತ್ಯದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಸರ್ಕಾರ ಘೋಷಿಸಿದೆ. ಅಂಥವರಿಗೆ ಅಪಮಾನ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಪ್ರೀತಿಗೆ ಅಡ್ಡಿಯಾದ ತಾಯಿ ಮತ್ತು ಮಗನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪ್ರತಿಭಟನೆಯಲ್ಲಿ ಮುಖಂಡ ಬಸವರಾಜ ರೊಟ್ಟಿ, ಅಶೋಕ ಬೆಂಡಿಗೇರಿ, ಕೆ.ಬಸವಪ್ರಸಾದ, ಮಹಾಂತೇಶ ಗುಡಸ್, ಈರಣ್ಣ ದಯನ್ನವರ, ಸೂರ್ಯಕಾಂತ ಭಾವಿ, ಸುಶೀಲಾ ಲಿಂಗಾಯತ, ವಂದನಾ ಬಾಬಾನಗರ ಹಾಗೂ
ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕಾಯಕ ಜೀವಿಗಳ ಸಂಘ, ಲಿಂಗಾಯತ ಸಂಘಟನೆ, ಚನ್ನಬಸವ ಫೌಂಡೇಷನ್, ಹಡಪದ ಸಮಾಜದ ಮುಖಂಡರು ಭಾಗವಹಿಸಿದ್ದರು.