ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮದ ಸರಸ್ವತಿ ಕಿರವೆ (26) ಹಾಗೂ ಆಕೆಯ ಮಕ್ಕಳಾದ ದೀಪಿಕಾ (7), ರೀತಿಕಾ (4) ಮೃತ ದುರ್ದೈವಿಗಳು.
ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಕಿರಣ ಎಂಬಾತನೊಂದಿಗೆ ಸರಸ್ವತಿ ಮದುವೆಯಾಗಿದ್ದರು. ಆದರೆ, ಕಿರಣ ಮದ್ಯ ವ್ಯಸನಿಯಾಗಿದ್ದು, ದಿನನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಆತನ ಕಿರುಕುಳ ತಳಲಾರದೆ ಸರಸ್ವತಿ ಎಂಟು ತಿಂಗಳ ಹಿಂದೆ ತಮ್ಮ ತವರು ಮನೆಗೆ ಬಂದಿದ್ದರು. ಇದೀಗ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆಯಿಂದ ಸರಸ್ವತಿ ಮತ್ತು ಆಕೆಯ ಮಕ್ಕಳ ಕಾಣೆಯಾಗಿದ್ದರು. ಅವರಿಗೆ ಹುಡುಕಾಟ ನಡೆಸಿದಾಗ, ತೋಟದ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿವೆ.
ಸ್ಥಳಕ್ಕೆ ಹಾರುಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.