ಸ್ಮಶಾನ ಭೂಮಿಯ ಬಳಿಕ ದಲಿತ ಯುವಕರು ಕುಳಿತಿದ್ದಕ್ಕೆ ಸವರ್ಣೀಯ ಮರಾಠರು ಆಕ್ಷೇಪಿಸಿ, ಗಲಾಟೆ ನಡೆಸಿದ್ದಾರೆ. ಮರಾಠ ಮತ್ತು ದಲಿತ ಯುವಕರ ಗುಂಪಿನ ನಡುವೆ ಘರ್ಷಣೆ ನಡೆದಿದ್ದು, ಸ್ಥಳಕ್ಕೆ ಬಂದ ಶಾಸಕ ವಿಠ್ಠಲ ಹಲಗೇಕರ ಅವರಿಗೂ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಪನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಬುಧವಾರ ಹುಂದರಿ ಹಬ್ಬ ಆಚರಿಸಿದ್ದ ದಲಿತ ಯುವಕರು, ಅಂದು ಸಂಜೆ ಸ್ಮಶಾನ ಭೂಮಿಯ ಬಳಿ ಕುಳಿತಿದ್ದರು. ಈ ವೇಳೆ, ಅಲ್ಲಿಗೆ ಬಂದ ಮರಾಠ ಯುವಕರ ಗುಂಪು ಗಲಾಟೆ ನಡೆಸಿದೆ. ಗಲಾಟೆಯು ತಾರಕಕ್ಕೇರಿ ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ.
ಎರಡು ಸಮುದಾಯಗಳ ಗಲಾಟೆ ಬಗ್ಗೆ ತಿಳಿದ ಖಾನಾಪುರ ಶಾಸಕರು ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಯುವಕರ ಗುಂಪುಗಳನ್ನು ಸಮಾಧಾನಿಸಲು ಯತ್ನಿಸಿದ್ದಾರೆ. ಈ ವೇಳೆ, ಕಿಡಿಗೇಡಿಗಳು ಅವರನ್ನೂ ಎಳೆದಾಡಿದ್ದು, ಶಾಸಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಗ್ರಾಮದ ಎರಡೂ ಗುಂಪುಗಳ ಸುಮಾರು 40 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ʼʼತೋಪನಕಟ್ಟಿ ಗ್ರಾಮವು ಶಾಸಕ ವಿಠ್ಠಲ್ ಹಲಗೇಕರ ಅವರ ಸ್ವಗ್ರಾಮವೇ ಆಗಿದೆ. ಶಾಸಕರು ಎರಡು ಸಮುದಾಯದ ನಡುವಿನ ಜಗಳ ಬಗೆಹರಿಸುವದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆʼʼ ಎಂದು ಭೀಮ್ ಆರ್ಮಿ ಆರೋಪಿಸಿದೆ.