ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆಗಳು ಕೊಡಿ, ನನ್ನೊಂದಿಗೆ ಮರಾಠಿಯಲ್ಲೇ ಮಾತನಾಡಿ ಎಂದು ಗ್ರಾಮ ಪಂಚಾಯತಿ ಪಿಡಿಒಗೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಭಾಷೆಯ ವಿಚಾರಕ್ಕೆ ಕೆಎಸ್‌ಆರ್‌ಟಿಸಿ ನಿರ್ವಾಹಕರ ಮೇಲೆ ಮರಾಠಿ ಯುವಕರ ಗುಂಪು ಹಲ್ಲೆ ನಡೆಸಿದ್ದ ಘಟನೆಯ ಬಳಿಕ ಬೆಳಗಾವಿಯಲ್ಲಿ ಭಾಷಾ ಸಂಘರ್ಷಗಳು ಮತ್ತೆ ಭುಗಿಲೆದ್ದಿವೆ. ಇದೀಗ, ಅಂತದ್ದೇ ಘಟನೆಯಲ್ಲಿ ಬೆಳಗಾವಿ ಸಮೀಪದ ಕಿಣಿಯೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಕಿಣಿಯೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಒ ನಾಗೇಂದ್ರ ಪತ್ತಾರ ಎಂಬವರಿಗೆ ತಿಪ್ಪಣ್ಣ ಡೋಕ್ರೆ ಎಂಬಾತ ನಿಂದಿಸಿ, ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, “ನನಗೆ ಕನ್ನಡ ಬರಲ್ಲ. ನನ್ನೊಂದಿಗೆ ನೀವು ಮರಾಠಿಯಲ್ಲಿ ಮಾತನಾಡಬೇಕು. ಸರ್ಕಾರಿ ದಾಖಲೆಗಳನ್ನು ಮರಾಠಿಯಲ್ಲೇ ಕೊಡಬೇಕು” ಎಂದು ತಿಪ್ಪಣ್ಣ ಕೇಳಿದ್ದಾರೆ.
ಅವರ ಮಾತಿಗೆ ಪ್ರತಿಕ್ರಿಯಿಸಿರುವ ಪಿಡಿಒ ನಾಗೇಂದ್ರ, “ಇದು ಕರ್ನಾಟಕ, ಇಲ್ಲಿ ಕನ್ನಡದಲ್ಲೇ ದಾಖಲೆ ಕೊಡಬೇಕು. ನೀವು ಕನ್ನಡದಲ್ಲಿ ಅರ್ಜಿ ಕೊಡಿ, ಪರಿಶೀಲಿಸಿ, ದಾಖಲೆ ಕೊಡುತ್ತೇನೆ” ಎಂದು ಹೇಳಿದ್ದಾರೆ.
ಅವರ ಮಾತಿಗೆ ಸಿಟ್ಟಾದ ಆರೋಪಿ ತಿಪ್ಪಣ್ಣ, ಪಿಡಿಒ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯಾರಾದರು ಒಂದು ಹೆಜ್ಜೆ ಮುಂದೆ ಬಂದರೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲಿನ ಸಿಬ್ಬಂದಿಗಳು ಪೊಲೀಸರನ್ನು ಕರೆಸುವುದಾಗಿ ಹೇಳಿದಾಗ, ಆತ ಪಂಚಾಯತಿ ಕಚೇರಿಯಿಂದ ಹೊರಹೋಗಿದ್ದಾನೆ.
ಬೆಳಗಾವಿ ಬಳಿಯ ಬಾಳೇಕುಂದ್ರಿ ಗ್ರಾಮದಲ್ಲಿ ಬಸ್ ಹತ್ತಿದ್ದ ಮರಾಠಿ ಯುವಕರು ನಿರ್ವಾಹಕ ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ, ನಿರ್ವಾಹಕನ ವಿರುದ್ಧವೂ ಲೈಂಗಿಕ ಕಿರುಕುಳದ ದೂರನ್ನೂ ದಾಖಲಿಸಿದ್ದರು. ಘಟನೆಯನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿ, ಪ್ರತಿಭಟನೆ ನಡೆಸಿದ್ದವು. ಘಟನೆಯಿಂದಾಗಿ, ಬೆಳಗಾವಿಯ ಮಹಾರಾಷ್ಟ್ರ-ಕರ್ನಾಟಕದ ಗಡಿಯಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿತ್ತು. ಸಾರಿಗೆ ಬಸ್‌ಗಳಿಗೆ ಮಸಿ ಬಳಿದು ದಾಂಧಲೆ ನಡೆಸಿದ್ದ ಘಟನೆಗಳೂ ವರದಿಯಾಗಿದ್ದವು.
ಬೆಳಗಾವಿಯಲ್ಲಿ ಮರಾಠಿಗರು ನಡೆಸುತ್ತಿರುವ ದಾಂಧಲೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ.