ಎಂಎಲ್ಎ, ಎಂಪಿಗಳ ಹೆಸರಿನಲ್ಲಿ ಪೊಲಿಸರಿಗೆ ಧಮ್ಕಿ ಹಾಕುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ನಾನು ಗೋಕಾಕ್ ಎಂಎಲ್ಎ ನಾ ಹೇಳಿದ ಕೆಲಸ ಮಾಡದಿದ್ದರೆ, ನಿಮ್ಮನ್ನು ಎತ್ತಂಗಡಿ ಮಾಡುತ್ತೇನೆ. ನನಗೆ ಸಿಎಂ ಪರಿಚಯವಿದ್ದಾರೆ ಎಂದು ಪೊಲೀಸರಿಗೆ ಧಮ್ಕಿ ಹಾಕುತ್ತಿದ್ದ ಆರೋಪಿ ಮೂಡಲಿಗಿ ತಾಲೂಕಿನ ಅರಭಾವಿ ಗ್ರಾಮದ ಸುನಿಲ್ ದಾಸರ ಎಂಬಾತನನ್ನು ಬಂಧಿಸಲಾಗಿದೆ. ಈತ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಹೆಸರಿನಲ್ಲಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಆರೋಪಿಯು 2019ರ ಲೋಕಾಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಬ ವಿಚಾರ ತನಿಖೆಯ ವೇಳೆ ತಿಳಿದು ಬಂದಿದೆ.
ಹಣದ ವಿಚಾರವಾಗಿ ಆರೋಪಿಯ ತಾಯಿಯನ್ನು ಗೋಕಾಕ ಪೋಲಿಸರು ವಿಚಾರಣೆ ನಡೆಸಿದ್ದರು. ಈ ವಿಷಯವಾಗಿ ಸುನಿಲ ದಾಸರ, ನನ್ನ ತಾಯಿಗೆ ತೊಂದರೆ ಕೊಡ್ತಿದ್ದೀರಾ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ, ಐಜಿ ವಿಕಾಸ ಕುಮಾರಗೆ ಕರೆ ಮಾಡಿದ್ದಲ್ಲದೆ, ಎತ್ತಂಗಡಿ ಮಾಡುವೆ ಎಂದು ಬೆದರಿಕೆ ಹಾಕಿದ್ದನು. ಈ ಕುರಿತು ಗೋಕಾಕ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಆರೋಪಿಯನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದಾರೆ.
