ಬೆಳಗಾವಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಬರ ಛಾಯೆ ಆವರಿಸಿದೆ. ಹಲವೆಡೆ ರೈತರು ಬೆಳೆದಿರುವ ಬೆಳಗಳು ಒಳಗುತ್ತಿವೆ. ಹೀಗಾಗಿ, ಪ್ರತಿದಿನ ಹಗಲಿನಲ್ಲಿ ಐದು ಗಂಟೆ ಮತ್ತು ರಾತ್ರಿ ಎರಡು ಗಂಟೆ – ಒಟ್ಟು ಐದು ಗಂಟೆಗಳ ಕಾಲ ಕೃಷಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಯಮಿತ (ಹೆಸ್ಕಾಂ) ಚಿಕ್ಕೋಡಿ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. “ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಗ್ರಾಮಗಳಲ್ಲಿ ವ್ಯತ್ಯಯವಾಗತ್ತಿದೆ. ಆದ್ಧರಿಂದ, ಲಭ್ಯವಿರುವ ವಿದ್ಯುತ್ ಅನ್ನು ಸಮರ್ಪಕವಾಗಿ ಪೂರೈಸಬೇಕು. ಕೊರತೆ ಇರುವ ವಿದ್ಯುತ್ ಕುರಿತು ಪ್ರಸ್ತಾವ ನೀಡಬೇಕು. ನಾಗರಮುನ್ನೋಳಿ ಮತ್ತು ಕರೋಶೀ ಭಾಗದಲ್ಲೂ ಸಮರ್ಪಕ ವಿದ್ಯುತ್ ಪೂರೈಕೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶಿಸಿದರು.
“ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಭೂಗತ ಕೇಬಲ್ ಅಳವಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಯಕ್ಸಂಬಾ ಪಟ್ಟಣ, ಕಾಡಾಪುರ, ಚಿಕ್ಕೋಡಿ ಮತ್ತು ಸದಲಗಾ ಪಟ್ಟಣ ಮತ್ತು ಯಾದ್ಯಾನವಾಡಿ ಗ್ರಾಮಗಳಲ್ಲಿ ಭೂಗತ ಕೇಬಲ್ ಅಳವಡಿಕೆಗಾಗಿ ಒಟ್ಟು ₹14 ಕೋಟಿ ಅನುದಾನ
ಮಂಜೂರು ಮಾಡಲಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯ ರಾಮಾ ಮಾನೆ, ಸಾಬಿರ ಜಮಾದಾರ, ಹೆಸ್ಕಾಂ ಚಿಕ್ಕೋಡಿ ವಿಭಾಗದ ಇಇ ಸುಪ್ರಭಾ ಬಂಡಗರ, ಸದಲಗಾ ಉಪವಿಭಾಗದ ಎಇಇ ಎಸ್.ಆರ್. ಸುಖಸಾರೆ, ಸೆಕ್ಷನ್ ಆಫೀಸರ್ ರೂಪಾ, ಸಂಭಾಜಿ ಉಪಸ್ಥಿತರಿದ್ಧರು