ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡಿರುವ ರಂಜಾನ್ ಸಾಬ್ ಮುಜಾವರ ಎಂಬುವವರು ರಾಮದುರ್ಗ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗೆ ಬಾಲ ರಾಮನ ಅಲಂಕಾರ ಮಾಡುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಧರ್ಮದ ಹೆಸರಿನಲ್ಲಿ ಕೋಮು ಸಾಮರಸ್ಯ ಕೆಡಿಸುವವವರಿಗೆ ತಮ್ಮ ನಡತೆಯ ಮೂಲಕ ಉತ್ತರ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಆ ಪ್ರತಿಮೆಯ ಮಾದರಿಯಲ್ಲಿಯೇ ಸಾಲಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 5ನೇ ತರಗತಿಯ ವಿದ್ಯಾರ್ಥಿ ವೀರೇಶ ರಾಜನಾಳನಿಗೆ ಮುಸ್ಲಿಂ ಸಮುದಾಯದ ರಂಜಾನಸಾಬ್ ಮುಜಾವರ್ ಬಾಲ ರಾಮನ ವೇಷವನ್ನು ಅಲಂಕಾರ ಮಾಡಿದ್ದಾರೆ. ಆ ವಿದ್ಯಾರ್ಥಿ ತಾಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ಈ ಕುರಿತು ಈ ದಿನ.ಕಾಮ್ ಜೊತೆಗೆ ರಂಜಾನಸಾಬ್ ಮುಜಾವರ ಮಾತನಾಡಿ, “ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ, ಎಲ್ಲರಿಗೂ ಮಾನವೀಯತೆ ಮುಖ್ಯವಾಗುತ್ತದೆ. ಯಾವ ಧರ್ಮಗಳೂ ಮತ್ತೊಬ್ಬರಿಗೆ ಕೇಡು ಬಯಸಲು ಹೇಳಿಲ್ಲ. ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಧರ್ಮ ಯಾವತ್ತಿಗೂ ಕೆಡುವುದಿಲ್ಲ. ಜಗಳ, ದಂಗೆಯನ್ನು ಹುಟ್ಟು ಹಾಕುವುದು ಧರ್ಮದ ಲಕ್ಷಣವಲ್ಲ. ನನಗೆ ಬಸವಣ್ಣನವರ ತತ್ವದಲ್ಲಿ ಬಹಳ ನಂಬಿಕೆಯಿರುವ ಕಾರಣ ಜಾತಿಭೇದದ ಪ್ರಶ್ನೆ ಬರುವುದಿಲ್ಲ. ನಾನು ಕುರಾನ್, ಬೈಬಲ್, ವೇದ, ತತ್ವ ಪ್ರವಚನದ ಜೊತೆಗೆ ವಚನಗಳನ್ನೂ ಓದುತ್ತೇನೆ. ನಮ್ಮ ಧರ್ಮದೊಂದಿಗೆ ಅನ್ಯ ಧರ್ಮದ ಬಗ್ಗೆಯೂ ಗೌರವ ಇರಬೇಕು” ಎಂದು ಹೇಳಿದರು.

ಈ ತರಹದ ಚಟುವಟಿಕೆಗಳಲ್ಲಿ ನನಗೆ ಬಹಳ ಆಸಕ್ತಿಯಿದ್ದು, ಸಾಲಾಪುರ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರು ನನಗೆ ಕರೆ ಮಾಡಿ, ವಿದ್ಯಾರ್ಥಿಗೆ ಬಾಲ ರಾಮನ ಛದ್ಮ ವೇಷವನ್ನು ಹಾಕಬೇಕು ಎಂದರು. ಅದರಲ್ಲೂ ಎಲ್ಲರೂ ಪೂಜಿಸುವ ರಾಮನ ಸೇವೆ ಮಾಡುವುದಕ್ಕೆ ನನಗೂ ಒಂದು ಅವಕಾಶ ಸಿಕ್ಕಿತ್ತಲ್ಲ ಎಂದು ಸಂತಸವಾಯಿತು. ಈ ಮೊದಲು ಶ್ರೀಕೃಷ್ಣನ ವೇಷ ಭೂಷಣವನ್ನೂ ಮಾಡಿದ್ದೆ. ವಲಯ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದೇವೆ. ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ವಿಶ್ವಾಸವಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ದಲಿತ ಕುಟುಂಬ ನಿರ್ಮಿಸಿದ್ದ ಜಾನುವಾರು ಶೆಡ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಕೋಮು ಗಲಭೆಗಳು ಹೆಚ್ಚಾಗುತ್ತಿರುವ ಇತ್ತೀಚಿನ ಸಂದರ್ಭದಲ್ಲಿ ರಂಜಾನ್ ಸಾಬ್ ಮುಜಾವರ್ ಅವರ ಕಾರ್ಯ ಕೋಮು ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು