200ನೇ ರಾಣಿ ಚನ್ನಮ್ಮನ ಕಿತ್ತೂರ ವಿಜಯೋತ್ಸವದ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬದಲಾಗಿ ಕಿತ್ತೂರ ಕರ್ನಾಟಕ ಸಾರಿಗೆ ಎಂದು ನಾಮಕರಣ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
2024 ರ ಕಿತ್ತೂರ ಚನ್ನಮ್ಮ ಉತ್ಸವದ ಪೂರ್ವಭಾವಿ ಸಿದ್ದತಾ ಸಭೆಯು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಸಚಿವರು, ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವಕ್ಕೆ 200 ವರ್ಷಗಳು ತುಂಬಿರುವ ಹಿನ್ನಲೆ ಕಿತ್ತೂರು ಉತ್ಸವ ವಿಜೃಂಭಣೆಯಿಂದ ಆಚರಿಸಬೇಕಿದೆ. ಇದೇ ವೇಳೆ ವಾಯ ಕರ್ನಾಟಕ ಸಾರಿಗೆ ಬದಲಾಗಿ ಕಿತ್ತೂರ ಕರ್ನಾಟಕ ಸಾರಿಗೆ ಎಂದು ನಾಮಕರಣ ಮಾಡಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಕಿತ್ತೂರ ಹಾಗೂ ಸ್ವಾತಂತ್ರ್ಯ ಯೋಧರ ಕುರಿತು ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸುವುದರ ಜೊತೆಗೆ ಕಾರ್ಯಕ್ರಮದ ಉದ್ಘಾಟನೆಗೆ ಸೂಕ್ತ ಗಣ್ಯರನ್ನು ಗುರುತಿಸಿ ಜೊತೆಗೆ ಉತ್ಸವದ ಸಂದರ್ಭದಲ್ಲಿ ಕಿತ್ತೂರಿನ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಉತ್ಸವದ ಅಂಗವಾಗಿ ಆಯೋಜಿಸುವ ಕ್ರೀಡಾ ಕೂಟಗಳಲ್ಲಿ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಗಮನ ನೀಡಬೇಕು. ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಬೇಕು.
ಮೂರು ದಿನಗಳ ಕಾಲ ಜರುಗಲಿರುವ ಚನ್ನಮ್ಮನ ಉತ್ಸವದ ಕಾರ್ಯಕ್ರಮದ ಪ್ರಯುಕ್ತ ಮಾಧ್ಯಮ ಗೋಷ್ಠಿ ಸೇರಿದಂತೆ ಇತರೆ ಗೋಷ್ಠಿಗಳ ಆಯೋಜಿಸಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸ್ಥಳೀಯ ಕಲಾವಿದರುಗಳಿಗೆ ಪ್ರಾಶಸ್ತ್ಯ ನೀಡಬೇಕು. ಕಲಾವಿದರ ಆಯ್ಕೆಗೆ ಸಮಿತಿ ರಚಿಸಿ ಸಮಿತಿಯಿಂದ ಆಯ್ಕೆಯಾದಂತಹ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ನಿಮಿತ್ತ ಸೆಪ್ಟೆಂಬರ್ 15 ರಂದು ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ಆಯೋಜಿಸಿದ್ದು, ಬೀದರದಿಂದ ಚಾಮರಾಜನಗರದವರೆಗೆ ಒಂದು ಗಂಟೆಯಲ್ಲಿಯೇ ಮಾನವ ಸರಪಳಿ ನಿರ್ಮಿಸಿ, ಸಂವಿಧಾನದ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ಉತ್ತರ ವಿಧಾನಸಭಾ ಶಾಸಕ ಆಸೀಫ್ (ರಾಜು) ಸೇಠ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.