ಪಾಠ ಮಾಡಲು ಶಿಕ್ಷಕರಿಲ್ಲ. ಜೊತೆಗೆ ಆಟದ ಮೈದಾನ, ಕುಡಿಯುವ ನೀರು, ಶೌಚಾಲಯವೂ ಇಲ್ಲ. ಶಾಲೆಯ ಮುಂಭಾಗದಲ್ಲಿ ಚರಂಡಿ ನೀರು ಹರಿಯುತ್ತಿದೆ. ಪಕ್ಕದಲ್ಲಿಯೇ ಸಾರ್ವಜನಿಕ ಮೂತ್ರಾಲಯ ಗಬ್ಬುನಾರುತ್ತಿದೆ – ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಶಾಲೆಯ ಪರಿಸ್ಥಿತಿ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದ ಶಾಲೆ ಮೂಲೆಗುಂಪಾಗುವ ಆತಂಕ ಎದುರಿಸುತ್ತಿದೆ.
“ಶಾಲೆಯಲ್ಲಿ 400ಕ್ಕೂ ಹೆಚ್ಚು ವಿಧ್ಯಾರ್ಥಿಗಳಿದ್ದೇವೆ. ಶಿಕ್ಷಕರು ಕಡಿಮೆ ಸಂಖ್ಯೆಯಲ್ಲಿದ್ಧಾರೆ. ಸರಿಯಾದ ಶೌಚಾಲಯವಿಲ್ಲ. ಕಲಿಕೆಗೆ ವಿಜ್ಞಾನ ಪ್ರಯೋಗಾಲಯವು ಇಲ್ಲ. ಆಟದ ಮೈದಾನವಿಲ್ಲ. ಇದರಿಂದಾಗಿ ಕಲಿಕೆಯಲ್ಲಿ ಹಿಂದಿಳಿಯುವ ಆತಂಕವಿದೆ” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಶಾಲೆಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಆದರೆ, ಈ ವರ್ಷ ಅವರನ್ನೂ ನೇಮಿಸಿಲ್ಲ. ನಮ್ಮ ಕಲಿಕೆಯ ಭವಿಷ್ಯಕ್ಕಾಗಿ ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು” ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಈದಿನ.ಕಾಮ್ಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ ಪಟ್ಟಣ, “15 ದಿನಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗುವುದು: ಎಂದು ಹೇಳಿದ್ಧಾರೆ.