ಬೆಳಗಾವಿ | ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸಹಿ ಸಂಗ್ರಹ ಆಂದೋಲನ

Date:

Advertisements

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ಕೇಂದ್ರ ಸಮಿತಿಯ ಕರೆಯ ಮೇರೆಗೆ ದೇಶ ವ್ಯಾಪಿ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಂಡಿದೆ.

ಬೆಳಗಾವಿಯಲ್ಲಿಂದು ಖಡೇಬಜಾರ್ ವೃತ್ತದಲ್ಲಿ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ಸಹ ನೀಡಲಾಯಿತು. ಈ ಸಂದರ್ಭದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡ ಕಾಮ್ರೇಡ್ ಲಕ್ಷ್ಮಣ ಜಡಗನ್ನವರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 9 ವರ್ಷಗಳಿಂದ ದೇಶದ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಅದಾನಿ, ಅಂಬಾನಿ ಸೇರಿದಂತೆ ಕೆಲವೇ ಬಂಡವಾಳಗಾರರ, ಕಾರ್ಪೊರೇಟ್ ಮನೆತನಗಳ ಅಭಿವೃದ್ಧಿಯನ್ನೇ ದೇಶದ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ.

ಆದರೆ, ವಾಸ್ತವದಲ್ಲಿ ಬಹುಸಂಖ್ಯಾತ ದುಡಿಯುವ ವರ್ಗ ವಿಪರೀತ ಬೆಲೆ ಏರಿಕೆ, ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣ, ನಿರುದ್ಯೋಗ, ಹಸಿವು, ಬಡತನ ಮುಂತಾದ ಜ್ವಲಂತ ಸಮಸ್ಯೆಗಳಿಂದ ಕಂಗೆಟ್ಟಿದ್ದಾರೆ. ಜನಸಾಮಾನ್ಯರ ಮೇಲೆ ಅತಿಹೆಚ್ಚಿನ ತೆರಿಗೆಯ ಭಾರ ಹೊರಿಸಿ ಕಳೆದ 9ವರ್ಷಗಳಲ್ಲಿ ಸುಮಾರು 20ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಬಂಡವಾಳಗಾರರಿಗೆ ಕಾರ್ಪೊರೇಟ್ ತೆರಿಗೆ ವಿನಾಯ್ತಿ, ಸಾಲ ಮನ್ನಾ, ವಸೂಲಾಗದ ಸಾಲ, ಉತ್ತೇಜಕಗಳ ಹೆಸರಿನಲ್ಲಿ ನೀಡಲಾಗಿದೆ.

Advertisements

ನಿಜವಾಗಿಯೂ ಜನಪರವಾಗಿದ್ದರೆ, ಅತಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹಾಕಿ ಜನಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 98ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದೆ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ಈ ದೇಶದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ 40ಸಾವಿರ ರೂಪಾಯಿಗಳಿದ್ದ ಸಾಲವು ಇಂದು 2023ರಲ್ಲಿ 1,46,000 ರೂಪಾಯಿಗಳಿಗೆ ಏರಿದೆ. ಇನ್ನೊಂದೆಡೆ ವಿಮಾನ ನಿಲ್ದಾಣಗಳು, ಬಂದರುಗಳು, ರೈಲ್ವೆ ಸೇರಿದಂತೆ ಜನರ ತೆರಿಗೆ ಹಣದಿಂದ ಕಟ್ಟಿ ಬೆಳೆಸಿದ ಸಾರ್ವಜನಿಕ ಸಂಸ್ಥೆಗಳನ್ನು ಬಿಡಿಗಾಸಿಗೆ ಬಂಡವಾಳಗಾರರಿಗೆ ಮಾರಲಾಗುತ್ತಿದೆ.

ಶಿಕ್ಷಣ, ಆರೋಗ್ಯ, ವಿದ್ಯುತ್ ಮುಂತಾದ ಮೂಲಭೂತ ಕ್ಷೇತ್ರಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ಅತ್ಯಾವಶ್ಯಕ ಸೇವೆಗಳ ಬಜೆಟ್ಟನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಯುವ ಜನರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತಿದ್ದ ನರೇಗಾ ಯೋಜನೆಯ ಅನುದಾನವನ್ನು ಕೂಡ ಕೇಂದ್ರ ಸರ್ಕಾರ ಕಡಿತ ಮಾಡುತ್ತಾ ಬಂದಿದೆ.

ಬಹುದೊಡ್ಡ ಸಂಖ್ಯೆಯಲ್ಲಿರುವ ಯುವಜನರಿಗೆ ಉದ್ಯೋಗ ಒದಗಿಸುವ ಬದಲು ಎಲ್ಲ ಸಾರ್ವಜನಿಕ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಮೋದಿ ಸರ್ಕಾರದ ಈ ಎಲ್ಲ ಕ್ರಮಗಳಿಂದಾಗಿ ದೇಶದ ಬಂಡವಾಳಗಾರರು ಪ್ರಪಂಚದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದರೆ, ದೇಶದ ಜನಸಾಮಾನ್ಯರ-ದುಡಿಯುವ ಜನರ ಬದುಕು ಬೀದಿಗೆ ಬಂದಿದೆ. ಆದರೆ, ಆಳುವ ವರ್ಗದ ಬಾಲ ಬಡುಕ ಮಾಧ್ಯಮಗಳ ಮೂಲಕ ದೇಶ ಅಭಿವೃದ್ಧಿ ಹೊಂದುತ್ತಿದೆ, ವಿಕಸಿತವಾಗುತ್ತಿದೆ ಎಂದು ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ ಎಂದರು.

ಪಕ್ಷದ ಸದಸ್ಯ ರಾಜು ಗಾಣಗಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಲೇ ವಿವಿಧ ಗ್ಯಾರಂಟಿಗಳನ್ನು ಒದಗಿಸುವ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ, ಈ ಗ್ಯಾರಂಟಿಗಳನ್ನು ಕೂಡ ಎಲ್ಲ ಅರ್ಹರಿಗೆ ತಲುಪಿಸಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಗ್ಯಾರಂಟಿಗಳನ್ನು ಒದಗಿಸುವ ನೆಪದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಮೂಲಭೂತ ಸೇವೆಗಳು ಸಂಪೂರ್ಣ ನೆಲಕಚ್ಚಿವೆ. ಯಾವುದೇ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ.

ಈ ವರ್ಷದ ತೀವ್ರ ಬರಗಾಲದ ಸಂದರ್ಭದಲ್ಲಿ ಬರ ಘೋಷಣೆಯೊಂದೇ ಸರ್ಕಾರದ ಸಾಧನೆಯಾಗಿದೆ. ಈವರೆಗೂ ಬರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಿಲ್ಲ. ಬರ ನಿರ್ವಹಣೆಗೆ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿಲ್ಲ. ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಜನ ವಿರೋಧಿ ನೀತಿಗಳನ್ನು ದುಡಿಯುವ ಜನತೆ, ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೋಮು ಭಾವನೆ, ಹುಸಿ ರಾಷ್ಟ್ರೀಯತೆ, ಭಾಷೆ, ಧರ್ಮ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಆದ್ದರಿಂದ ಈ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಬಂಡವಾಳಶಾಹಿ ಪಕ್ಷಗಳನ್ನು, ಅವರು ಜಾರಿಗೊಳಿಸುತ್ತಿರುವ ಬಂಡವಾಳಶಾಹಿಪರ ನೀತಿಗಳನ್ನು ಒಕ್ಕೊರಲಿನಿಂದ ತಿರಸ್ಕರಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ನಿರಂತರವಾಗಿ ಜನರ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿರುವ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ದೇಶವ್ಯಾಪಿ ಸಹಿ ಸಂಗ್ರಹ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ನಾಗರಿಕರು, ದುಡಿಯುವ ಜನರು, ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅದೇರೀತಿ ಜನರು ಮತ್ತೊಮ್ಮೆ ಚುನಾವಣಾ ರಾಜಕೀಯಕ್ಕೆ ಬಲಿಯಾಗದೆ ಅನ್ಯಾಯ, ಅಸಮಾನತೆ ಮೇಲೆ ನಿಂತಿರುವ ಈ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ತರಲು ನಿರಂತರವಾಗಿ ಹೋರಾಟಗಳನ್ನು ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಬಲಪಡಿಸಬೇಕು ಎಂದರು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯ ಲಕ್ಕಪ್ಪ ಬಿಜ್ಜನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಇಡೀ ದಿನ ಸಹಿ ಸಂಗ್ರಹ ಆಂದೋಲನವನ್ನು ನಡೆಸಲಾಯಿತು. ಜನತೆ ಉತ್ಸಾಹದಿಂದ ಹೋರಾಟದಲ್ಲಿ ಪಾಲ್ಗೊಂಡು ಹೋರಾಟವನ್ನು ಬೆಂಬಲಿಸಿದರು. ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾದ ಅನಂತ ಜಾಧವ, ವಿನಾಯಕ, ಪ್ರಕಾಶ, ಶ್ರೀಕಾಂತ, ಬಿಸ್ಮಿಲ್ಲಾ ದಬಾಡಿ, ರೇಣುಕಾ ಕಡಕೋಳ, ರಾಧಿಕಾ ಮತ್ತು ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X