ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮೀರಾಬಾಯಿ (25) ಕೊಲೆಯಾದ ದುರ್ದೈವಿ. ಬಾಲಾಜಿ ಕಬಲಿ (35) ಕೊಲೆ ಆರೋಪಿ. ದಂಪತಿ ಮಹಾರಾಷ್ಟ್ರ ಮೂಲದವರಾಗಿದ್ದು, ಕಬ್ಬು ಕಟಾವು ಮಾಡುವ ಗ್ಯಾಂಗ್ ಜತೆ ಕೆಲಸಕ್ಕೆಂದು ಉಪ್ಪಾರಹಟ್ಟಿಗೆ ಬಂದಿದ್ದರು ಎನ್ನಲಾಗಿದೆ. ಕುಡಿತದ ಚಟವಿದ್ದ ಬಾಲಾಜಿ ಪತ್ನಿ ಜತೆ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾನೆ. ಕೊನೆಗೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಲಾರಿ-ಕಾರು ನಡುವೆ ಅಪಘಾತ; ಪತಿ ಎದುರೇ ಪತ್ನಿ ಸಾವು
ಮಾಹಿತಿ ಪ್ರಕಾರ ದಂಪತಿಗೆ ಎರಡು ವರ್ಷದ ಮಗುವೊಂದಿತ್ತು. ತಾಯಿಯ ಮೃತದೇಹದ ಮೇಲೆ ಮಗು ಮಲಗಿ ಎಬ್ಬಿಸಲು ಪ್ರಯತ್ನಿಸುತ್ತಿದ್ದದ್ದು ನೋಡುಗರ ಮನ ಕಲಕುವಂತಿತ್ತು. ಸ್ಥಳೀಯರು ಪಾಪಿ ಪತಿಗೆ ಹಿಡಿಶಾಪ ಹಾಕಿದ್ದು, ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಬಾಲಾಜಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
