ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೊಲೀಸ್ ಇಲಾಖೆ, ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸಲು ಮುಂದಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಅಧಿಕೃತ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತಿದೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ 2022ರಲ್ಲಿ ರಾಜ್ಯಾದ್ಯಂತ ಟೋವಿಂಗ್ ನಿಷೇಧ ಹೇರಲಾಗಿತ್ತು. ಆದರೆ, ಬೆಳಗಾವಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಮತ್ತೆ ಟೋಯಿಂಗ್ ಆರಂಭಿಸಲು ನಗರ ಪೊಲೀಸರು ಮುಂದಾಗಿದೆ. ಮುಂದಿನ ವಾರದಿಂದ ಸಂಚಾರಿ ಪೊಲೀಸರು ಗಸ್ತು ಆರಂಭಿಸಲಿದ್ದಾರೆ. ನಿಯಮ ಉಲ್ಲಂಘಿಸುವ ವಾಹನಗಳನ್ನು ಟೋಯಿಂಗ್ ಮಾಡಲಿದ್ದಾರೆ ಎಂದು ಸಿದ್ದರಾಮಪ್ಪ ತಿಳಿಸಿದ್ದಾರೆ.
“ಹಬ್ಬದ ದಿನಗಳಲ್ಲಿ ಕಿರಿದಾದ ಮಾರುಕಟ್ಟೆ ಪ್ರದೇಶವು ಜನ, ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ವಾಹನ ಸವಾರರು ಹಾಗೂ ವಾಹನ ಚಾಲಕರು ವಾಹನ ನಿಲುಗಡೆಗೆ ಜಾಗ ಅರಸಿ ಮಾರುಕಟ್ಟೆಯಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ರಸ್ತೆ ಬದಿ ನಿಲ್ಲಿಸಿರುವ ವಾಹನಗಳನ್ನು ಎಳೆದು ತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರದಿಂದ ಟೋಯಿಂಗ್ ವಾಹನಗಳು ‘ನೋ ಪಾರ್ಕಿಂಗ್’ ಜಾಗದಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಪೊಲೀಸ್ ಠಾಣೆಗೆ ಸಾಗಿಸಲಿವೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಖಾಸಗಿ ಏಜೆನ್ಸಿಗಳು ಟೋಯಿಂಗ್ ವಾಹನಗಳ ಗುತ್ತಿಗೆ ಪಡೆಯುತ್ತಿದ್ದವು. ಆದರೆ, ಈಗ ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಗಣೇಶೋತ್ಸವದ ಮುನ್ನಾದಿನದಂದು ವಾಹನಗಳನ್ನು ಟೋಯಿಂಗ್ ಮಾಡುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.
ಸಂಚಾರ ಪೊಲೀಸರ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಸಂಚಾರ ಠಾಣೆಗಳಲ್ಲಿ 20,000ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸುಮಾರು 1.3 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?: 5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್
“ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಹೆಚ್ಚಿನ ಜನರು ನಗರಕ್ಕೆ ಬರುತ್ತಾರೆ. ಪ್ರತಿ ವರ್ಷ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಬೆಳಗಾವಿ ಬೆಳೆದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ ಪರಿಹಾರ ಮಾಡುವವರು ಕಾಣೆಯಾಗಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವುದು ಅಗತ್ಯ. ಇದಕ್ಕಾಗಿ ಇಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು” ಎಂದು ಬೆಳಗಾವಿ ನಿವಾಸಿ ರವಿ ಕಾಂಬಳೆ ಹೇಳಿದ್ದಾರೆ ‘ಟಿಒಐ’ ವರದಿ ಮಾಡಿದೆ.
ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಅಗತ್ಯ ಇರುವ ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಜನರು ಸರಿಯಾಗಿ ಪಾರ್ಕಿಂಗ್ ಮಾಡದಿದ್ದರೆ, ಅವರ ವಾಹನಗಳನ್ನು ಟೋಯಿಂಗ್ ಮಾಡುವುದು ಖಚಿತ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.