ಕೆಎಸ್‌ಆರ್‌ಟಿಸಿಯಲ್ಲ ಮೆಕ್ಯಾನಿಕ್ ನೌಕರನಾಗಿ ಕೆಲಸ ಮಾಡುತ್ತಿದ್ದ ನೌಕರರೊಬ್ಬರು ಸಾರಿಗೆ ಬಸ್‌ನಲ್ಲಿಯೇ ನೇಟು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಎನ್‌ಡಬ್ಲ್ಯೂಆರ್‌ಟಿಸಿ ಡಿಪೋ-1ರಲ್ಲಿ ನಡೆದಿದೆ.
ಮೃತನನ್ನು ಬಸ್ ಮೆಕ್ಯಾನಿಕ್ ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ. ಅವರು ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದಾರೆ. ಮೇಲಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಶವ ಅವರು ಕೆಲ ದಿನಗಳಿಂದ ಬೆನ್ನು ನೋವಿಗೆ ತುತ್ತಾಗಿದ್ದರು. ಕೆಲವು ದಿನಗಳವರೆಗೆ ತಮ್ಮ ಕೆಲಸವನ್ನು ಬದಲಿಸದಂತೆ ಡಿಪೋ ಮ್ಯಾನೇಜರ್ ಲಿಂಗರಾಜ ಲಾಠಿ ಅವರು ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್ ಅವರಿಗೆ ಮನವಿ ಮಾಡಿದ್ದರು. ಆದರೂ, ಅವರನ್ನು ಅಧಿಕಾರಿಗಳು ಪಂಚರ್ ಹಾಕುವ ವಿಭಾಗಕ್ಕೆ ಬದಲಾಯಿಸಿ, ನಿಯೋಜಿಸಿದ್ದರು. ಇದರಿಂದ ನೊಂದ ಕೇಶವ ಅವರು ಕೆಲಸದ ಸ್ಥಳದಲ್ಲಿಯೇ ಬಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತನ ಕುಟುಂಬಸ್ಥರು ಕೇಶವ ಅವರ ಮೃತದೇಹವನ್ನು ಡಿಪೋ-1ರ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಮೃತ ಕೇಶವ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.