ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಛತ್ರಪತಿ ಶಿವಾಜಿ ಗಲ್ಲಿಯ ಸಕ್ಷಮ್ ಪಾಟೀಲ್ (20) ಮತ್ತು ಸಿದ್ದಾರ್ಥ ಪಾಟೀಲ್ (23) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇಬ್ಬರೂ ಬೈಕ್ ಮೇಲೆ ಕಾಕತಿಯ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ, ಹಿಂದಿನಿಂದ ಬಂದ ಅಪರಿಚಿತ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಅಪ್ಪಳಿಸಿದ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.