ಬೆಳಗಾವಿ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ಮಳೆ ಸುರಿದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈಗಲೂ ಮೋಡ ಕವಿದ ವಾತಾವರಣವಿದ್ದು, ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಮುಂದುವರಿದಿದೆ.
ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗಿನಿಂದಲೇ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದೆ. ಬಿಟ್ಟು-ಬಿಟ್ಟು ಮಳೆ ಸುರಿಯುತ್ತಿದ್ದು, ಸೋಮವಾರ ರಾತ್ರಿಯವರೆಗೂ ಸುರಿದಿದೆ.
ಬೆಳಗಾವಿ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಹುಕ್ಕೇರಿ, ನಿಪ್ಪಾಣಿ, ಗೋಕಾಕ, ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದೆ.
ಜಿಲ್ಲೆಯಲ್ಲಿ ಸಮೃದ್ಧ ಮಳೆಯಾದ ದಾಖಲೆ ಇಲ್ಲದಿದ್ದರೂ ಮುಂಗಾರು ನಿರೀಕ್ಷೆಯಲ್ಲಿದ್ದ ರೈತರು ನಿರಾಳರಾಗಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗಿದೆ.
ಜೂನ್ 24ರಿಂದ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಇಸ್ರೋ ಮುನ್ಸೂಚನೆ ನೀಡಿತ್ತು. ಅದರಂತೆ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.