ಯುವತಿಯೊಬ್ಬರು ನಾಪತ್ತೆಯಾಗಿದ್ದು, ಯುವತಿಯ ಕುಟುಂಬಸ್ಥರು ಮುಸ್ಲಿಂ ಯುವಕನ ಮನೆಯ ಮೇಲೆ ದಾಳಿ ಮಾಡಿ, ಕಲ್ಲು ತೂರಿ ದಾಂಧಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಧಿಕ ಮುಚ್ಚಂಡಿ ಎಂಬವರು ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ಆಕೆಯನ್ನು ಅದೇ ಗ್ರಾಮದ ನಿವಾಸಿ ಸದ್ರುದ್ದೀನ್ ಬೇಪಾರಿ ಎಂಬ ಯುವಕ ಅಪಹರಣ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಅನುಮಾನಿಸಿದ್ದಾರೆ. ಆತನ ಮನೆಯ ಮೇಲೆ ದಾಳಿ ನಡೆಸಿ, ಕ್ರೌರ್ಯ ಮರೆದಿದ್ದಾರೆ.
ಯುವತಿಯ ಸಂಬಂಧಿಕರು ನಡೆಸಿದ ದಾಳಿಯಲ್ಲಿ ಸದ್ರುದ್ದೀನ್ ಅವರ ಮನೆಯ ಬಾಗಿಲು, ಕಿಟಕಿಗಳಿಗೆ ಮುರಿದಿವೆ ಮತ್ತು ಪಾತ್ರೆ, ಸಾಮಗ್ರಿಗಳಿಗೆ ಹಾನಿಯಾಗಿದೆ. ಮಾತ್ರವಲ್ಲದೆ, ಕೆಲವು ಪುಂಡ ಗುಂಪು ಗ್ರಾಮದ ಹೊರ ವಲಯದಲ್ಲಿರುವ ಈದ್ಗಾ ಗೋಪುರ ಮತ್ತು ದರ್ಗಾ ಮೇಲೂ ದಾಳಿ ನಡೆಸಿ, ಹಾನಿ ಮಾಡಿವೆ.
ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.