ಬೆಳಗಾವಿ ಕುವೆಂಪು ನಗರದಲ್ಲಿ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ನಾನು ಶಾಸಕಿಯಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ರಂಗಕ್ಕೆ ಆದ್ಯತೆ ನೀಡುತ್ತ ಬಂದಿದ್ದೇನೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದಲ್ಲಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳು ಮತ್ತು ಅಗತ್ಯವಿರುವ ಪ್ರಾಥಮಿಕ ಶಾಲೆಗಳಲ್ಲಿ ‘ಸ್ಮಾರ್ಟ್’ ತರಗತಿ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ವ ಪಡೆದಿದೆ. ತಮ್ಮ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂಬುದು ಎಲ್ಲ ಪಾಲಕರ ಅಪೇಕ್ಷೆಯಾಗಿದೆ. ಮಕ್ಕಳೇ ತಮ್ಮ ಆಸ್ತಿ ಎಂದು ತಂದೆ-ತಾಯಿ ಹೇಳುತ್ತಾರೆ. ಅಂತೆಯೇ ಮಕ್ಕಳು ಸಹ, ‘ಹೆತ್ತವರೇ ನಮ್ಮ ಆಸ್ತಿ’ ಎನ್ನಬೇಕು. ಅವರ ಆರೋಗ್ಯ ಮತ್ತು ವೃದ್ದಾಪ್ಯ ಜೀವನದ ಕುರಿತಾಗಿ ಚಿಂತನೆ ನಡೆಸಬೇಕು’ ಎಂದು ತಿಳಿಸಿದರು.