ಚುನಾವಣೆಯ ಅಖಾಡದಲ್ಲಿ ಸಾಮಾನ್ಯವಾಗಿ ಗುಂಪು, ಪ್ಯಾನೆಲ್, ಹಣ ಬಲವೇ ಮುಖ್ಯವೆಂದು ಭಾಸವಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ವಿಕಲ ಚೇತನರಾದ ಗದಿಗೆಪ್ಪ ಬೇಲೂರ ಅವರು ಈ ಕಲ್ಪನೆಗೆ ಸವಾಲು ಹಾಕುತ್ತಿದ್ದು, ಸೆಪ್ಟೆಂಬರ್ 14ರಂದು ನಡೆಯಲಿರುವ ರಾಮದುರ್ಗ ತಾಲೂಕಿನ ಖಾನಪೇಟ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಚುನಾವಣೆಯಲ್ಲಿ, 3 ಗುಂಪುಗಳು ಸ್ಪರ್ಧೆ ಮಾಡಿದ್ದು ಇವರುಗಳ ಮಧ್ಯೆ ವಿಕಲ ಚೇತನ ಅಭ್ಯರ್ಥಿ ಗದಿಗೆಪ್ಪ ಬೇಲೂರ ಅವರ ಎಕಾಂಗಿಯ ಸ್ಪರ್ಧೆ ಹೊಸ ಕುತೂಹಲ ಮೂಡಿಸಿದೆ.
ಈ ಕುರಿತು ಈದಿನ. ಕಾಮ್ ಜತೆ ಮಾತನಾಡಿದ ಅವರು ನಾನು ಇದುವರೆಗೂ ಅನೇಕ ಚುನಾವನೆಗಳಲ್ಲಿ ಸ್ಪರ್ಧೆ ಮಾಡಿದ್ದೇನೆ ಆದರೆ ಯಾವ್ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿಲ್ಲ ನನ್ನಗೆ ಸ್ಪರ್ಧೆ ಮಾಡುವದು ಮುಖ್ಯ ಮತದಾರರಿಗೆ ಇಷ್ಟವಾದರೆ ಗೆಲ್ಲಿಸುತ್ತಾರೆ, ಮತ್ತು ನಾನು ಗುಂಪುಗಳಲ್ಲಿ ಸ್ಪರ್ಧೆ ಮಾಡಿಲ್ಲಾ ಸೋಲೋ ಗೆಲುವೋ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇನೆ. ಮನುಷ್ಯನಿಗೆ ಆತ್ಮವಿಸ್ವಾಸ ಮತ್ತು ಧೈರ್ಯ ಮುಖ್ಯ ಹಾಗೂ ಸ್ಪರ್ಧಾ ಮನೋಭಾವನೆಯು ಇರಬೇಕು ಇಂದಲ್ಲ ನಾಳೆ ಗೆಲುವು ಸಿಗುತ್ತದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.
ಗದಿಗೆಪ್ಪ ಇದುವರೆಗೆ 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ತಾಲೂಕು ಪಂಚಾಯತ್‌ನಿಂದ ಹಿಡಿದು ಗ್ರಾಮ ಪಂಚಾಯತ್, ಪುರಸಭೆ, ಜಿಲ್ಲಾ ಪಂಚಾಯತ್, ಎಪಿಎಂಸಿ,ವಿಧಾನಸಭಾ ಎಲ್ಲ ಕಣಗಳಲ್ಲೂ ಅವರ ಹೆಜ್ಜೆ ಗುರುತು ಇದೆ. ಆದರೆ ಯಾವ ಚುನಾವಣೆಯಲ್ಲೂ ಅವರಿಗೆ ಗೆಲುವು ಸಿಕ್ಕಿಲ್ಲ ಆದರೂ ಛಲ ಬಿಡದೆ ಚುನಾವಣೆಯಲ್ಲಿ ಸ್ಪರ್ಧೆಸುವದನ್ನು ಬಿಟ್ಟಿಲ್ಲ. ಸೋಲು ಅವರ ಜೀವನದ ಅತಿಥಿಯಾಗಿರಬಹುದು, ಆದರೆ ಸೋಲು ಅವರನ್ನು ನಿಲ್ಲಿಸಿಲ್ಲ. ಶಾರೀರಿಕ ಅಡಚಣೆಗಳು ಎಷ್ಟು ಗಂಭೀರವಾದರೂ ಮನೋಬಲವೇ ದೊಡ್ಡ ಬಲ ಎಂಬುದಕ್ಕೆ ಗದಿಗೆಪ್ಪ ಜೀವಂತ ಸಾಕ್ಷಿ. ರಾಜಕೀಯ ಲೆಕ್ಕಾಚಾರ, ಹಣದ ಆರ್ಭಟಗಳ ನಡುವೆ ಅವರು ತೋರಿಸಿರುವ ಎಕಾಂಗಿಯ ಹೋರಾಟವೂ ಇತರರಿಗೂ ನಿಜವಾದ ಪ್ರೇರಣೆಯಾಗಿದೆ.
ಅಂತಿಮವಾಗಿ, ಈ ಚುನಾವಣೆಯಲ್ಲಿ ಗದಿಗೆಪ್ಪ ಗೆಲ್ಲುವರೋ, ಸೋಲುವರೋ ಅದು ಭವಿಷ್ಯದ ವಿಷಯ. ಆದರೆ ಪ್ರಜಾಪ್ರಭುತ್ವದ ನಿಜವಾದ ಗೆಲುವು ಅವರ ಧೈರ್ಯ, ಅವರ ಹಠಮಾರಿ ನಂಬಿಕೆಯಲ್ಲಿ ಈಗಾಗಲೇ ಕಂಡುಬರುತ್ತಿದೆ.