ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮೇಲೆ ಬೀದರ್, ಹಾವೇರಿ, ದಾವಣಗೆರೆ ಹಾಗೂ ಬೆಳಗಾವಿ ಸೇರಿದಂತೆ ಹಲವು ಜೆಲ್ಲೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗಾವಿ ದಾಳಿ ವಿವರ
ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಮೂರು ಕಡೆ ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು. ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಮನೆ ಖರೀದಿಸಿದ್ದಾರೆ.
ಹಾಗೆಯೇ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠಲ ಶಿವಪ್ಪ ಅವರ ಮನೆ ಮೇಲೂ ದಾಳಿ ಮಾಡಲಾಗಿದೆ. ಮೂರು ತಿಂಗಳ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವೇಳೆ ವಿಠಲ ಸಿಕ್ಕಿಬಿದ್ದಿದ್ದರು. ಅವರ ಬಳಿ ದಾಖಲೆ ಇಲ್ಲದ ₹1.10 ಕೋಟಿ ಹಣ ಪತ್ತೆಯಾಗುತ್ತು. ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ ಮಾಡಿ ಈ ಹಣ ವಶಕ್ಕೆ ಪಡೆದಿದ್ದರು. ಇದೇ ಹಿನ್ನೆಲೆಯಲ್ಲಿ ವಿಠಲ ಮನೆ, ಕಚೇರಿ ಮೇಲೂ ದಾಳಿ ಮಾಡಲಾಗಿದೆ. ನಿಪ್ಪಾಣಿ ನಗರದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ದಾಖಲೆ ಇಲ್ಲದ ಮತ್ತಷ್ಟು ಹಣ ಸಿಕ್ಕಿದೆ.
ಮತ್ತೊಂದೆಡೆ, ಧಾರವಾಡದ ಕೆಐಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಮನೆ ಮೇಲೂ ದಾಳಿ ಮಾಡಲಾಗಿದೆ. ಸವದತ್ತಿ ತಾಲ್ಲೂಕಿನ ಉಗರಗೋಳದಲ್ಲಿ ಗೋವಿಂದಪ್ಪ ಫಾರ್ಮ್‌ಹೌಸ್ ಹೊಂದಿದ್ದಾರೆ. ಅವರ ಧಾರವಾಡದ ಮನೆ ಹಾಗೂ ಉಗರಗೋಳ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ವಶಕ್ಕೆ ಪಡೆದಿದ್ದಾರೆ.
ಹಾವೇರಿ ದಾಳಿ ವಿವರ
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಕಾಶಿನಾಥ್ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ. ಹಾವೇರಿ ನಗರದಲ್ಲಿರುವ ಬಸವೇಶ್ವರನಗರದ 1 ನೇ ಕ್ರಾಸ್‌ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್, ಕೊಠಡಿಗೆ ಹೋಗಿ * 9 ಲಕ್ಷ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು. ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. ₹ 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು ₹ 14 ಲಕ್ಷ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸಿಡಿಪಿಒ ಕಚೇರಿಯ ಎಫ್‌ಡಿಎ ನೌಕರ ರಾಜು ಸುವ್ರ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ನಸುಕಿನಲ್ಲಿ ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಈ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. “ಕೆಲ ಮಾಹಿತಿಗಳು ಬಂದಿದ್ದವು. ಅವುಗಳ ಪರಿಶೀಲನೆ ನಡೆಸಿದಾಗ ದಾಖಲೆಗಳು ಲಭ್ಯವಾಗಿದ್ದವು. ಅದನ್ನು ಆಧರಿಸಿ ರಾಜು ಸುವ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ತಪಾಸಣೆ ನಡೆಯುತ್ತಿದೆ” ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಸೇರಿ ಒಂಭತ್ತು ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳ ದಾಳಿ
ದಾವಣಗೆರೆ ದಾಳಿ ವಿವರ
ದಾವಣಗೆರೆ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಅವರ ನಿವಾಸದ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಮಂಗಳವಾರ(ನ.12) ದಾಳಿ ನಡೆಸಿದ್ದಾರೆ. ದಾವಣಗೆರೆಯ ಶಕ್ತಿನಗರದ ಮೂರನೇ ಕ್ರಾಸ್ ನಲ್ಲಿರುವ ಕಮಲ್ ರಾಜ್ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಕ್ರಮ ಆಸ್ತಿ ದೂರಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದೆ. ಕಮಲ್ ರಾಜ್ ನಿವಾಸದಲ್ಲಿ ಲೋಕಾಯುಕ್ತರು ದಾಖಲೆ ಹಾಗೂ ನಗದು ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಬೀದರ್ ದಾಳಿ ವಿವರ
ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದ್ದು, ಬೀದರ್, ಬೆಂಗಳೂರು ನಿವಾಸ ಹಾಗೂ ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ನುಗ್ಗಿದ್ದಾರೆ. ಬೀದರ್‌ನ ಕಮಲಾಪುರ ರಸ್ತೆಯ ಕಾಲೋನಿಯ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುತ್ತಿದ್ದಾರೆ. ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ರವೀಂದ್ರಕುಮಾರ್ ಕಾರ್ಯನಿರ್ವಹಿಸಿದ್ದಾರೆ.