ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಥಳಿಸಿರುವ ಅಮಾನವೀಯ ಘಟನೆ ಖಂಡಿಸಿ ಎಐಎಂಸ್ಎಸ್(ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಳಗಾವಿ ಜಿಲ್ಲೆಯ ಎಐಎಂಸ್ಎಸ್ ಸಂಘಟಕಿ ಗಂಗೂಬಾಯಿ ಕೊಕರೆ ಪತ್ರಿಕೆ ಹೇಳಿಕೆ ನೀಡಿದ್ದು, “ಸಂತ್ರಸ್ತ ಮಹಿಳೆಯ ಮಗ ಮತ್ತು ಅದೇ ಜಾತಿಯ ಹುಡುಗಿ ಇಬ್ಬರೂ ಪ್ರೀತಿಸಿದ್ದು, ಮನೆ ಬಿಟ್ಟು ಹೋಗಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಮನೆಯವರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದು, ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಆಕೆಯ ಮನೆಯನ್ನೂ ಕೂಡ ಧ್ವಂಸ ಮಾಡಿದ್ದಾರೆ” ಎಂದು ಆರೋಪಿಸಿದರು.
“ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಈ ಘಟನೆಯ ಬಗ್ಗೆ ತನ್ನ ಆಘಾತವನ್ನು ವ್ಯಕ್ತಪಡಿಸುತ್ತಾ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಇದರಲ್ಲಿ ಭಾಗಿಯಾದ ಹಲವರನ್ನು ಬಂಧಿಸಲಾಗಿದೆ. ಉಳಿದವರನ್ನು ಸರ್ಕಾರ ಈ ಕೂಡಲೇ ಬಂಧಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ಸಂತ್ರಸ್ತ ಮಹಿಳೆಗೆ ಭದ್ರತೆ ಹಾಗೂ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
“ಮೇಲಿನ ಘಟನೆಯಲ್ಲಿ ಆದಂತೆ ಅಥವಾ ಅಂತರ್ಜಾತಿ, ಅನ್ಯ ಧರ್ಮೀಯ ಹುಡುಗನನ್ನು ತಮ್ಮ ಮಗಳು ಪ್ರೀತಿಸಿದಳೆಂಬ ಒಂದೇ ಕಾರಣಕ್ಕಾಗಿ ಹೆತ್ತ ಮಗಳನ್ನೇ ಕೊಂದು ಹಾಕುವುದು ಅಥವಾ ಕುಟುಂಬದವರ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವರದಿಯಾಗುತ್ತಲೇ ಇವೆ. ಈ ರೀತಿಯ ಘಟನೆಗಳು ಪದೇ ಪದೆ ನಡೆಯುತ್ತಿರುವುದು ಸಮಾಜದಲ್ಲಿರುವ ಹಳೆಯ ಉಳಿಗಮಾನ್ಯ ಮೌಲ್ಯಗಳ ಮನಸ್ಥಿತಿ ಮತ್ತು ಸರ್ಕಾರದ ಆಡಳಿತ ಹಾಗೂ ಕಾನೂನಿನ ವೈಫಲ್ಯವನ್ನು ಎತ್ತಿ ತೋರಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಾನವ ಹಕ್ಕುಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ: ಸಂಜಯ್ ಗುದಗುಡಿ
“ಇತ್ತೀಚಿಗೆ ಬರುತ್ತಿರುವ ಸಿನೆಮಾ, ಧಾರಾವಾಹಿಗಳೂ ಕೂಡ ಕೊಲೆ, ಕ್ರೌರ್ಯ, ವಿಕೃತ ಆಲೋಚನೆಯನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿರುವುದರಿಂದ ಇಂತಹ ಮನಸ್ಥಿತಿಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಸ್ವಾತಂತ್ರ್ಯ ನಂತರದ ನಮ್ಮ ಸಮಾಜದಲ್ಲಿ ಸ್ಥಾಪಿಸಬೇಕಾಗಿದ್ದ ಪ್ರಜಾತಾಂತ್ರಿಕ ಮೌಲ್ಯಗಳ ಕೊರತೆಯಿಂದಾಗಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಆಯ್ಕೆಯ ಹಕ್ಕು ಇತ್ಯಾದಿಗಳು ರೂಢಿಯಲ್ಲಿಲ್ಲ. ಈ ಹೊಸ ಮೌಲ್ಯಗಳನ್ನು ಸ್ಥಾಪಿಸಲು ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಎಲ್ಲ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.