ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಸೆಪ್ಟೆಂಬರ್ 22ರ ಶುಕ್ರವಾರದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ನೀರಾವರಿ ಹಿತಾಸಕ್ತಿ ಹಾಗೂ ಕುಡಿಯುವ ನೀರು ಒದಗಿಸುವುದು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಸಲಹಾ ಸಮಿತಿಯ ನಿರ್ಧಾರ ಆಧರಿಸಿ ಅಧಿಕಾರಿಗಳು ಆದೇಶ ಮಾಡಲಿದ್ದಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರದಿಂದ ಹದಿನೈದು ದಿನಗಳವರೆಗೆ ನೀರು ಹರಿಸಲಾಗುವುದು” ಎಂದು ತಿಳಿಸಿದರು.
ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ, “ಮಳೆ ಕೊರತೆಯಿಂದ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಹಾಗಾಗಿ ನೀರಾವರಿಗೆ ಬಿಡಲು ನೀರು ಉಳಿಸಿಕೊಂಡು ಕುಡಿಯುವ ನೀರನ್ನೂ ಬಿಡುಗಡೆಗೊಳಿಸಬೇಕು” ಎಂದು ತಿಳಿಸಿದರು.
ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, “ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆಗೊಳಿಸುವುದು ಅವಶ್ಯವಾಗಿದೆ” ಎಂದು ಸಲಹೆ ನೀಡಿದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟಿಲ್ ಮಾತನಾಡಿ, “ಮುಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಜಲಾಶಯದಿಂದ ನೀರು ನಿರ್ವಹಣೆ ಮಾಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ಸುಪ್ರೀಂಗೆ ಅರ್ಜಿ ಸಲ್ಲಿಸಿದ ಇಬ್ಬರು ರೈತರು
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಎಂಜಿನಿಯರ್ ವಿ ಎಸ್ ಮಧುಕರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.