ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಲೆಮಾರಿ ಸಮುದಾಯದ ಹಲವಾರು ಕುಟುಂಬಗಳು ಕಡೆಗಣನೆಗೆ ಒಳಗಾಗಿರುವ ಆರೋಪ ಕೇಳಿಬಂದಿದೆ. ಫಾರ್ಮ್ ವಿತರಣೆಯಲ್ಲಿ ಆಗಿರುವ ಲೋಪದಿಂದ ಹಲವು ವರ್ಷಗಳಿಂದ ಇಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯದ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಯರಗಟ್ಟಿ ಪಟ್ಟಣದ ಭಾಗ ಸಂಖ್ಯೆ-44ರಲ್ಲಿ ಅಲೆಮಾರಿ ಸಮುದಾಯದ ಜನರು ಕಳೆದ 30 ರಿಂದ 35 ವರ್ಷಗಳಿಂದ ವಾಸವಾಗಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ಅಂಗವಾಗಿ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿದ್ದರೂ, ಎಲ್ಲ ಅರ್ಹರಿಗೆ ಫಾರ್ಮ್ ವಿತರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದೇ ಕುಟುಂಬದಲ್ಲಿ ಕೆಲವರಿಗೆ ಮಾತ್ರ ಫಾರ್ಮ್ ನೀಡಿ, ಉಳಿದವರಿಗೆ ನೀಡದೇ ಹೋಗಿರುವ ಪ್ರಕರಣಗಳು ನಡೆದಿವೆ. ಒಂದು ಕುಟುಂಬದಲ್ಲಿ ತಾಯಿಗೆ, ಕೆಲವು ಮಕ್ಕಳು ಹಾಗೂ ಸೊಸೆಯಂದಿರಿಗೆ ಫಾರ್ಮ್ ನೀಡಿದ್ದರೆ, ಉಳಿದ ಇಬ್ಬರು ಮಕ್ಕಳು ಹಾಗೂ ಅವರ ಪತ್ನಿಯರಿಗೆ ಫಾರ್ಮ್ ನೀಡಿಲ್ಲ.
ಮತ್ತೊಂದು ಕುಟುಂಬದಲ್ಲಿ ಮನೆಯ ಯಜಮಾನನಿಗೆ ಫಾರ್ಮ್ ನೀಡಲಾಗಿದ್ದು, ಅವರ ಪತ್ನಿಗೆ ಮಾತ್ರ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಫಾರ್ಮ್ ನೀಡಿಲ್ಲ ಎಂದು ಆರೋಪಿಸಲಾಗಿದೆ.
12 ಸದಸ್ಯರಿರುವ ಮತ್ತೊಂದು ಕುಟುಂಬದಲ್ಲಿ ತಾಯಿ, ಕೆಲವು ಮಕ್ಕಳು ಹಾಗೂ ಸೊಸೆಯಂದಿರಿಗೆ ಫಾರ್ಮ್ ನೀಡಿದ್ದರೂ, ಇನ್ನೊಬ್ಬ ಮಗ ಹಾಗೂ ಸೊಸೆಗೆ ಫಾರ್ಮ್ ನೀಡಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನೂ ಅಧಿಕಾರಿಗಳು ತಿಳಿಸಿಲ್ಲ ಎಂದು ಅಲೆಮಾರಿ ಸಮುದಾಯದ ಜನರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 35 ವರ್ಷಗಳಿಂದ ಯರಗಟ್ಟಿಯಲ್ಲಿ ವಾಸವಾಗಿರುವ ಮತ್ತೊಬ್ಬ ಮಹಿಳೆಗೂ ಫಾರ್ಮ್ ನೀಡಿಲ್ಲ. ನಾವು ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದೇವೆ. ಆದರೂ ನಮಗೆ ಫಾರ್ಮ್ ಸಿಕ್ಕಿಲ್ಲ ಎಂದು ಅವರು ಹೇಳಿದರು.
ಇದು ಕೇವಲ ಉದಾಹರಣೆಯಾಗಿದ್ದು ಇದೇ ರೀತಿ ಇಲ್ಲಿನ ಅನೇಕ ಅಲೆಮಾರಿಗಳಿಗೆ ಫಾರ್ಮ್ ವಿತರಿಸಿಲ್ಲ ಎಂದು ಅಲೆಮಾರಿಗಳು ತಿಳಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಯರಗಟ್ಟಿ ತಹಸೀಲ್ದಾರ್ ಅವರನ್ನು ಸಂಪರ್ಕಿಸಿದಾಗ, ಸಂಬಂಧಪಟ್ಟ ಬಿಎಲ್‌ಒ ಹಾಗೂ ತಲಾಟಿಯವರೊಂದಿಗೆ ಮಾತನಾಡಿ ವಿಷಯವನ್ನು ಪರಿಶೀಲಿಸುತ್ತೇನೆ. ಅನಕ್ಷರಸ್ಥರಿಗೆ ಫಾರ್ಮ್ ಭರ್ತಿ ಮಾಡಲು ಅಧಿಕಾರಿಗಳು ನೆರವು ನೀಡಬೇಕು ಎಂದು ಸೂಚಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಫಾರ್ಮ್ ನೀಡಲು ಸಾಧ್ಯವಿಲ್ಲ, ಎಂದು ತಿಳಿಸಿದರು.
35 ವರ್ಷಗಳಿಂದ ವಾಸವಾಗಿರುವ ಕೆಲವರಿಗೆ ಫಾರ್ಮ್ ನೀಡದಿರುವ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ತಪ್ಪಾಗಿದ್ದರೆ ಪರಿಶೀಲಿಸಿ ತಕ್ಷಣ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಲೆಮಾರಿ ಸಮುದಾಯದ ಜನರಿಗೆ ಸಮರ್ಪಕ ಮಾಹಿತಿ ತಲುಪದಿರುವುದು, ಅನಕ್ಷರಸ್ಥರಿಗೆ ಅಗತ್ಯ ನೆರವು ದೊರೆಯದಿರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಇದು ಕೇವಲ ಯರಗಟ್ಟಿ ಪಟ್ಟಣಕ್ಕೆ ಸೀಮಿತವಾಗದೇ, ರಾಜ್ಯದ ವಿವಿಧ ಭಾಗಗಳಲ್ಲೂ ಇದೇ ರೀತಿಯ ಸಮಸ್ಯೆಗಳಿರುವ ಬಗ್ಗೆ ದೂರುಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಸರ್ಕಾರ ಹಾಗೂ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಲೆಮಾರಿ ಸಮುದಾಯ ಸೇರಿದಂತೆ ಯಾವುದೇ ಅರ್ಹ ಮತದಾರ, ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗಳ ಮೂಲಭೂತ ಹಕ್ಕಾಗಿದೆ. ಅನಕ್ಷರಸ್ಥರು ಹಾಗೂ ಅಲೆಮಾರಿ ಸಮುದಾಯದ ಜನರಿಗೆ ಅಗತ್ಯ ಮಾಹಿತಿ ಮತ್ತು ನೆರವು ನೀಡುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರ ಹೊರಗುಳಿಯದಂತೆ ಚುನಾವಣಾ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಯರಗಟ್ಟಿಯಲ್ಲಿ ಕೇಳಿಬಂದಿರುವ ಲೋಪಗಳನ್ನು ತಕ್ಷಣ ಪರಿಶೀಲಿಸಿ, ಅರ್ಹರಿಗೆ ಫಾರ್ಮ್ ವಿತರಿಸಿ ಅವರ ಮತದಾನದ ಹಕ್ಕನ್ನು ಸಂರಕ್ಷಿಸುವುದು ಸರ್ಕಾರ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಇಂತಹ ಸಮಸ್ಯೆಗಳು ರಾಜ್ಯದ ಇತರ ಭಾಗಗಳಲ್ಲೂ ಮರುಕಳಿಸದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.





