ಉತ್ತಮ ಸಂಸ್ಕಾರ, ಶಿಸ್ತು, ಮೌಲ್ಯಯುತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ಜಲಗೊಳ್ಳುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನಕುಮಾರ್ ಹೇಳಿದರು.
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಸಾಧನೆಗೈದು ಪ್ರತಿಷ್ಠಿತ ಐಐಟಿ, ಎನ್‌ಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
“ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ತಮಗಿಷ್ಟವಾದ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯಲು ಸಾಧ್ಯವಿದೆ. ಸ್ವಂತ ಕಾಲೇಜು, ಆಸ್ತಿ, ಅಂತಸ್ತು ಇದ್ದರೂ ವಿದ್ಯಾರ್ಥಿಗಳಿಗೆ ಇಷ್ಟವಾದ ಸೀಟು, ಕಾಲೇಜು ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್, ಅರ್ಹತೆ ಪಡೆದು ಕೌನ್ಸೆಲಿಂಗ್ ಮೂಲಕವೇ ಸೀಟು ಪಡೆಯಬೇಕಾಗುತ್ತದೆ” ಎಂದು ತಿಳಿಸಿದರು.
“ಉತ್ತಮ ಸಾಧನೆಗೈಯಲು ವಿದ್ಯಾರ್ಥಿಗಳು ಯಾವತ್ತೂ ನಕಾರಾತ್ಮಕ ಆಲೋಚನೆಗಳನ್ನು ಬೆಳೆಯಲು ಆಸ್ಪದ ಕೊಡಬಾರದು. ಎರಡು ವರ್ಷದ ತಪಸ್ಸಿನ ಓದು ಸಾಮಾನ್ಯ ವಿದ್ಯಾರ್ಥಿಯನ್ನು ಕೂಡ ಅಸಾಮಾನ್ಯ ಸಾಧಕನನ್ನಾಗಿ ಪರಿವರ್ತಿಸುತ್ತದೆ. ಎಲ್ಲರಲ್ಲಿಯೂ ಸಮಾನ ಪ್ರತಿಭೆ ಇದ್ದೇ ಇರುತ್ತದೆ. ಹೆಚ್ಚು ಪರಿಶ್ರಮಪಟ್ಟರೆ ಉನ್ನತ ಸಾಧನೆ ಮಾಡಬಹುದು” ಎಂದು ಅಭಿಪ್ರಾಯಪಟ್ಟರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ಹಿಂದುಳಿದ ನಮ್ಮ ಭಾಗದಲ್ಲಿ ಬಸವಲಿಂಗ ಪಟ್ಟದ್ದೇವರ ದೂರದೃಷ್ಟಿ, ಸತತ ಪ್ರಯತ್ನದ ಫಲವಾಗಿ ಶಿಕ್ಷಣ ಸಂಸ್ಥೆ ಹುಟ್ಟಿದ್ದು, ಅವರು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇದು ಶೈಕ್ಷಣಿಕ ಕ್ರಾಂತಿ ಎಂದರೂ ತಪ್ಪಾಗಲಾರದು” ಎಂದರು.

“ಬಸವಲಿಂಗ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ವಿದ್ಯಾರ್ಥಿಯಾಗಿ ಬಂದಿದ್ದರು. ಅವರಿಗೆ ಜೀವನದಲ್ಲಿ ಶಿಕ್ಷಕರಾಗಬೇಕು ಎಂಬುವ ಬಯಕೆಯಿತ್ತು. ಲಿಂಗೈಕ್ಯ ಚೆನ್ನಬಸವ ಪಟ್ಟದ್ದೇವರು ಬಸವಲಿಂಗ ಪಟ್ಟದ್ದೇವರಲ್ಲಿನ ಸೇವಾ ಮನೋಭಾವ, ಸದ್ಗುಣಗಳನ್ನು ಕಂಡು ಭಾಲ್ಕಿ ಹಿರೇಮಠದ ಪೀಠಾಧಿಪತಿಯನ್ನಾಗಿ ನೇಮಿಸಿ ಸಮಾಜಕ್ಕೆ ದಾರಿ ತೋರುವ ಗುರುವನ್ನಾಗಿಸಿದರು” ಎಂದು ತಿಳಿಸಿದರು.
“ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ ದೊರಕುತ್ತದೆ. ಇದರ ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೀಟ್, ಜೆಇಇ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುತ್ತಾರೆ. ಇವರ ಸಾಧನೆಯ ಶ್ರೇಯಸ್ಸು ನಮ್ಮ ಕಾಲೇಜಿನ ಸಿಬ್ಬಂದಿಗೆ ಸಲ್ಲಬೇಕು. ಎಲ್ಲ ವಿದ್ಯಾರ್ಥಿಗಳು ಸದ್ಗುಣ, ಸದ್ವಿಚಾರ, ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಇಇ ಮೇನ್ಸ್, ಅಡ್ವಾನ್ಸ್ ಪರೀಕ್ಷೆಗಳಲ್ಲಿ ಅಮೋಘ ಸಾಧನೆಗೈದ 56 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನಕುಮಾರ ದಂಪತಿಯನ್ನು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ : ‘SIR ಎಂದರೆ ಮುಷ್ಟಿಯೊಳಗಿರುವ ಗುಬ್ಬಚ್ಚಿ’; ಜಾಗೃತ ಕರ್ನಾಟಕದ ವಿಚಾರ ಸಂಕಿರಣದಲ್ಲಿ ದೇವನೂರ ಮಹಾದೇವ
ಸಮಾರಂಭದಲ್ಲಿ ಮಹಾಲಿಂಗ ಸ್ವಾಮೀಜಿ, ಪ್ರಮುಖರಾದ ಚನ್ನಬಸವಣ್ಣ ಬಳತೆ, ಪ್ರಸನ್ನ ಖಂಡ್ರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಜಯರಾಜ ಖಂಡ್ರೆ, ಸಿದ್ದಯ್ಯ ಕವಡಿಮಠ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಮತ್ತಿತರರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮಧುಕರ ನಿರೂಪಿಸಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.





