ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರಂಕಲಕೂಪ್ಪ, ತೋರಣಗಟ್ಟಿ, ಚಿಕ್ಕತಡಸಿ ಹಾಗೂ ಗೊಣಗನೂರ ಗ್ರಾಮಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನೂರಾರು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.
ಕಬ್ಬಿನ ಜತೆಗೆ ಡ್ರಿಪ್ ಪೈಪ್‌ಗಳು ಹಾಗೂ ಮೋಟರ್ ಕೇಬಲ್‌ಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಹೋದ ರೈತರೊಬ್ಬರು ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳೆ ಕಳೆದುಕೊಂಡ ರೈತರಿಗೆ ಹೆಸ್ಕಾಂ ಇಲಾಖೆ ತಕ್ಷಣ ಪರಿಹಾರ ನೀಡಬೇಕು ಹಾಗೂ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಮದುರ್ಗ ತಾಲೂಕು ತೀವ್ರ ಬರಗಾಲದ ಹೊಡೆತಕ್ಕೆ ಸಿಲುಕಿದೆ. ಹೆಸರು, ಈರುಳ್ಳಿ, ತೊಗರಿ ಹಾಗೂ ಗೋವಿನಜೋಳ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಮಳೆಯ ಕೊರತೆಯಿಂದ ಕಬ್ಬಿನ ಇಳುವರಿಯೂ ಕಡಿಮೆಯಾಗಿದೆ. ಸರ್ಕಾರದಿಂದ ಬರ ಪರಿಹಾರವೂ ಇನ್ನೂ ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಸುಟ್ಟುಹೋಗುತ್ತಿರುವುದು ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ರಂಕಲಕೂಪ್ಪ ಗ್ರಾಮದಲ್ಲಿ 45 ಎಕರೆ ಕಬ್ಬು ನಾಶ
ರಂಕಲಕೂಪ್ಪ ಗ್ರಾಮದ ರೈತ ವಿಠಲ ಅವರು ಈ ದಿನ.ಕಾಮ್ ಜತೆ ಮಾತನಾಡಿ, ಮೊದಲ ದಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂದಾಜು 35 ಎಕರೆ ಕಬ್ಬು ಸುಟ್ಟಿದೆ. ಎರಡನೇ ದಿನ ಮತ್ತೆ 10 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ ಎಂದು ತಿಳಿಸಿದರು.
ಬಿಸಿಲಿನ ತಾಪಕ್ಕೆ ಕಬ್ಬು ಒಣಗಿರುವುದರಿಂದ ಮಧ್ಯಾಹ್ನದ ವೇಳೆ ಸಣ್ಣ ಕಿಡಿ ಬಿದ್ದರೂ ಬೆಂಕಿ ವೇಗವಾಗಿ ಹರಡುತ್ತದೆ. ಬೆಳಿಗ್ಗೆ ತಂಪಾದ ವಾತಾವರಣ ಹಾಗೂ ಇಬ್ಬನಿ ಇರುವುದರಿಂದ ಬೆಂಕಿ ಹರಡುವ ಅಪಾಯ ಕಡಿಮೆ ಇರುತ್ತದೆ. ಹೀಗಾಗಿ ಬೆಳಿಗ್ಗೆ ವಿದ್ಯುತ್ ಪೂರೈಕೆ ಮಾಡುವಂತೆ ವಿದ್ಯುತ್ ಇಲಾಖೆಗೆ ಮನವಿ ಮಾಡಿದ್ದರೂ ಮಧ್ಯಾಹ್ನ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಪೂರೈಕೆಯ ಸಮಯವನ್ನು ಬದಲಾಯಿಸಬೇಕು. ಬೆಂಕಿಯಿಂದ ನಷ್ಟ ಅನುಭವಿಸಿದ ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬೆಂಕಿ ನಂದಿಸಲು ಹೋದ ರೈತ ಆಸ್ಪತ್ರೆಗೆ ದಾಖಲು
ಕಬ್ಬಿನ ತೋಟಕ್ಕೆ ಬೆಂಕಿ ಹೊತ್ತಿಕೊಂಡಾಗ ಅದನ್ನು ನಂದಿಸಲು ಹೋದ ರಂಕಲಕೊಪ್ಪ ಗ್ರಾಮದ ರೈತ ಅಪ್ಪಣ್ಣ ಗುದಗಿ ಅವರಿಗೆ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಅಪ್ಪಣ್ಣ ಅವರು, ನಮ್ಮ ಕಬ್ಬಿನ ಬೆಳೆಯೂ ಬೆಂಕಿಗಾಹುತಿಯಾಗಿದೆ. ಬೆಂಕಿ ನಂದಿಸಲು ಹೋದಾಗ ಹೊಗೆಯಿಂದ ಉಸಿರಾಡಲು ಸಾಧ್ಯವಾಗಲಿಲ್ಲ. ಇದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ತಿಳಿಸಿದರು.

ಗೊಣಗನೂರಿನಲ್ಲಿ ಏಳು ಎಕರೆ ಕಬ್ಬು ಭಸ್ಮ
ಗೊಣಗನೂರ ಗ್ರಾಮದ ರೈತ ಸೈಯದ್ ಅವರು ಈ ದಿನ.ಕಾಮ್ ಜತೆ ಮಾತನಾಡಿ, ತಮ್ಮ ಮತ್ತು ಸಹೋದರರ ಏಳು ಎಕರೆ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾಗಿದೆ. ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಪೈಪ್‌ಗಳು ಹಾಗೂ ಮೋಟರ್‌ಗೆ ಸಂಬಂಧಿಸಿದ ಕೇಬಲ್‌ಗಳು ಕೂಡ ಸುಟ್ಟುಹೋಗಿವೆ ಎಂದು ತಿಳಿಸಿದರು.
ಒಂದು ಎಕರೆ ಕಬ್ಬು ಬೆಳೆಯಲು ಸುಮಾರು 80 ಸಾವಿರ ರೂಪಾಯಿ ಖರ್ಚಾಗುತ್ತದೆ. ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ ಕಬ್ಬು ಸುಟ್ಟುಹೋಗಿದೆ. ಹೆಸ್ಕಾಂನ ಲೈನ್‌ಮನ್ ಸ್ಥಳಕ್ಕೆ ಬಂದು ಫೋಟೊ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಇಲಾಖೆಯ ಬೇರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ನಾವು ಸ್ವತಃ ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದೇವೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ತೋರಣಗಟ್ಟಿಯಲ್ಲಿ ಸುಮಾರು 40 ಎಕರೆ ಕಬ್ಬು ನಾಶ
ತೋರಣಗಟ್ಟಿ ಗ್ರಾಮದ ರೈತ ಮುತ್ತನಗೌಡ ಪಾಟೀಲ ಅವರು ಈ ದಿನ.ಕಾಮ್ ಜತೆ ಮಾತನಾಡಿ, ಗ್ರಾಮದಲ್ಲಿ ಸುಮಾರು 40 ಎಕರೆ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾಗಿದೆ ಎಂದು ತಿಳಿಸಿದರು.
ತಮ್ಮ ಎರಡು ಎಕರೆ ಕಬ್ಬಿನ ಬೆಳೆಯೂ ಸುಟ್ಟುಹೋಗಿದೆ. ಶಕುಂತಲಾ ಅಂಗಡಿ, ಸಿದ್ದಿಂಗಪ್ಪ ದೊಡ್ಡಲಿಂಗನ್ನವರ, ಯಲ್ಲಪ್ಪ ನಾಗಪ್ಪ ಪಾಟೀಲ, ಮಾರುತಿ ಬಾಳಪ್ಪ ಪಾಟೀಲ, ದ್ಯಾಮವ್ವ ಪಾಟೀಲ, ಬಸವರಾಜ ಪಾಟೀಲ, ಶಿವಪ್ಪ ನರಗುಂದ, ಬಸವರಾಜ ತೊಂಡಿಕಟ್ಟಿ ಹಾಗೂ ಮಹಾದೇವಪ್ಪ ತೊಂಡಿಕಟ್ಟಿ ಸೇರಿದಂತೆ ಹಲವು ರೈತರ ಕಬ್ಬು ನಾಶವಾಗಿದೆ. ಕಬ್ಬಿನ ತೋಟಗಳಲ್ಲಿ ಅಳವಡಿಸಿದ್ದ ಡ್ರಿಪ್ ಪೈಪ್‌ಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದರು.
ಹಳೆಯ ವಿದ್ಯುತ್ ತಂತಿಗಳಿಂದ ಅಪಾಯ: ರೈತ ಸಂಘಟನೆ ಆರೋಪ
ರೈತ ಸಂಘಟನೆಯ ಮುಖಂಡ ಶಿವಾನಂದ ದೊಡ್ಡವಾಡ ಅವರು ಈ ದಿನ.ಕಾಮ್ ಜತೆ ಮಾತನಾಡಿ, ಬಹಳ ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ತಂತಿಗಳು ಹಲವು ಕಡೆ ಜೋತು ಬಿದ್ದಿವೆ. ಅವುಗಳನ್ನು ಸರಿಪಡಿಸಿ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ರಾಮದುರ್ಗ ತಾಲೂಕಿನ ಚಿಕ್ಕತಡಸಿಯಲ್ಲಿ ಸುಮಾರು 10 ಎಕರೆ ಕಬ್ಬು ಸುಟ್ಟಿದೆ. ಕೆಲವು ದಿನಗಳ ಹಿಂದೆ ತೋರಣಗಟ್ಟಿ ಗ್ರಾಮದಲ್ಲಿ ಸುಮಾರು 30 ಎಕರೆ ಹಾಗೂ ರಂಕಲಕೂಪ್ಪ ಗ್ರಾಮದಲ್ಲಿ ಸುಮಾರು 40 ಎಕರೆ ಕಬ್ಬು ಸುಟ್ಟಿದೆ ಎಂದು ಅವರು ಹೇಳಿದರು.
ಕಬ್ಬಿಗೆ ಬೆಂಕಿ ಹೊತ್ತಿಕೊಂಡಾಗ ಅದನ್ನು ನಂದಿಸಲು ಹೋದ ರೈತ ಅಪ್ಪಣ್ಣ ಗುದಗಿ ಅವರಿಗೆ ಅವಘಡ ಸಂಭವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆಯ ವಿದ್ಯುತ್ ತಂತಿಗಳ ಸಮಸ್ಯೆಯನ್ನು ನಿರ್ಲಕ್ಷಿಸದೆ ತಕ್ಷಣ ಸರಿಪಡಿಸಬೇಕು. ಬೆಂಕಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಶಿವಾನಂದ ದೊಡ್ಡವಾಡ ಒತ್ತಾಯಿಸಿದರು.
ಈ ಕುರಿತು ರೈತ ಸಂಘಟನೆಯ ಮುಖಂಡರು ರಾಮದುರ್ಗ ತಹಸೀಲ್ದಾರರನ್ನು ಪ್ರಶ್ನಿಸಿದಾಗ, ಹೆಸ್ಕಾಂ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗಾಹುತಿಯಾದ ಕಬ್ಬಿನ ಬೆಳೆಗೆ ಹೆಸ್ಕಾಂ ಇಲಾಖೆಯವರೇ ಪರಿಹಾರ ನೀಡಬೇಕು. ಈ ಕುರಿತು ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಲಾಗುವುದು ಎಂದು ತಹಸೀಲ್ದಾರರು ಭರವಸೆ ನೀಡಿದ್ದಾರೆ ಎಂದು ರೈತ ಸಂಘಟನೆಯವರು ತಿಳಿಸಿದ್ದಾರೆ.
ಆದರೆ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಯಾವಾಗ ದೊರೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೆಂಕಿಗಾಹುತಿಯಾದ ಕಬ್ಬಿನ ಪ್ರಮಾಣ ಹಾಗೂ ಕೃಷಿ ಉಪಕರಣಗಳ ನಷ್ಟವನ್ನು ಸಮಗ್ರವಾಗಿ ಪರಿಶೀಲಿಸಿ, ಪರಿಹಾರ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಿದೆ.
ವಿದ್ಯುತ್ ತಂತಿ ಸರಿಪಡಿಸಿ, ರೈತರ ಬದುಕು ಉಳಿಸಿ
ಬರಗಾಲದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿರುವ ನಷ್ಟ ಮತ್ತಷ್ಟು ಭಾರವಾಗಿದೆ. ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಿ, ಸುರಕ್ಷಿತ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವುದು ಹೆಸ್ಕಾಂ ಇಲಾಖೆಯ ಜವಾಬ್ದಾರಿಯಾಗಿದೆ.
ಬೆಂಕಿಗಾಹುತಿಯಾದ ಕಬ್ಬಿನ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ನಷ್ಟದ ಅಂದಾಜು ಮಾಡಿ ರೈತರಿಗೆ ವಿಳಂಬವಿಲ್ಲದೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ರೈತರ ಹಾಗೂ ರೈತ ಸಂಘಟನೆಯವರ ಆಗ್ರಹವಾಗಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಹೆಸ್ಕಾಂ ಇಲಾಖೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.





