ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿವೆ. ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿನ ಅಭಾವ ಉಂಟಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಗಳು ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಲಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಗ್‌ರಾವ್ ಸರರ್ಕಿಲ್ ಆರೋಪಿಸಿದರು
ದೇವದುರ್ಗ ಪಟ್ಟಣದ ಡಾ.ಬಿಆರ್.ಅಂಬೇಡ್ಕರ್ ವೃತ್ತದಲ್ಲಿ ಕೆಪಿಆರ್‌ಎಸ್, ಎಐಎಡ್ಯೂಯು ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಡ್ಯಾಂನಲ್ಲಿ ನೀರಿನ ಲಭ್ಯತೆ ಅಧಿಕಾರಿಗಳು ಸ್ಪಷ್ಟವಾಗಿ ಹೇಳುತ್ತಿಲ್ಲ. ಹೀಗಾಗಿ ರೈತರಲ್ಲಿ ಗೊಂದಲ ಉಂಟಾಗಿದ್ದು, ಬೆಳೆಗಳು ರಕ್ಷಣೆಗೆ ಹರಸಾಹಸ ಪಡುವಂತಾಗಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ರೈತರು ಮೆಣಸಿನಕಾಯಿ ಬಿತ್ತನೆ ಮಾಡಲಾಗಿದ್ದು, ಅವೈಜ್ಞಾನಿಕ ವಾರಾಬಂದಿ ಪದ್ದತಿ ಕೈಗೊಂಡ ಹಿನ್ನೆಲೆ ನಾಲೆಗಳಿಗೆ ಸಮರ್ಪಕವಾಗಿ ನೀರು ಬಾರದೇ ಇರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಗಬ್ಬೂರು ಕೊನೆ ಭಾಗದ ರೈತರ ಸಮಸ್ಯೆಗಳು ಹೇಳತೀರದಾಗಿವೆ. ನಾರಾಯಣಪುರ ಬಲದಂಡೆ ಕಾಲುವೆಗಳ ದುರಸ್ತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ, ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ತೀವ್ರ ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ವಾರಾಬಂದಿ ಪದ್ಧತಿಯನ್ನು ಕೈಬಿಟ್ಟು, ಡಿಸೆಂಬರ್ ತಿಂಗಳವರೆಗೆ ನಿರಂತರವಾಗಿ ನೀರು ಹರಿಸಿದರೆ ಮೆಣಸಿನಕಾಯಿ ಬಿತ್ತನೆ ಮಾಡಿದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಾಲೆಗಳಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆ ರೈತರು ಕಣ್ಣೀರು ಹಾಕುವಂತಾಗಿದೆ. ನಾಲ್ಕು ದಿನಗಳ ಕಾಲ ಕೈಗೊಂಡಿರುವ ಪಾದಯಾತ್ರೆ ಯಶಸ್ವಿಯಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದರು.
ಶಬ್ಬಿರ ಜಾಲಹಳ್ಳಿ ಮಾತನಾಡಿ, ಬರ ತಾಲೂಕ ಘೋಷಣೆ ಮಾಡಿದ ರಾಜ್ಯ ಸರಕಾರ ಪರಿಹಾರ 2500ರೂ. ಘೋಷಣೆ ಮಾಡಿದ್ದು, ಒಂದು ಚೀಲ ಗೊಬ್ಬರ ಖರೀದಿಸಲು ಹಣ ಸಾಲಲ್ಲ. ಈ ಪಾದಯಾತ್ರೆಯಲ್ಲಿ ನಾಲ್ಕು ದಿಕ್ಕಿನಿಂದ ರೈತರು ಸೇರಲಿದ್ದು, ಅ.27ರಂದು ಜಿಲ್ಲಾಧಿಕಾರಿ ಕಚೇರಿ ಮುಂದಿ ಹೋರಾಟದಲ್ಲಿ 2ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ರೈತರ ಬಗ್ಗೆ ಕಾಳಜಿ ಇಲ್ಲದೇ ಬೇಡಿಕೆಗಳಿಗೆ ಸ್ಪಂದನೆ ನೀಡದೇ ರೈತರನ್ನು ಅಗೌರವದಿಂದ ಕಾಣುತ್ತಿವೆ. ನಾರಾಯಣಪುರ ಬಲದಂಡೆ ಕಾಲುವೆಗಳ ದುರಸ್ತಿಗಾಗಿ ನೂರಾರು ಕೋಟಿ ರೂ. ಅನುದಾನ ನೀಡಿದ್ದು, ಆದರೂ, ಕೊನೆ ಭಾಗದ ರೈತರಿಗೆ ನೀರು ಮುಟ್ಟುತ್ತಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾದರಿಂದ ರೈತರು ಸಾಲದ ಚಿಂತೆ ಮಾಡುವಂತಾಗಿದೆ. ಕೂಡಲೇ 25ಸಾವಿರ ರೂ. ರೈತರ ಸಾಲಮನ್ನ ಮಾಡಬೇಕು. ಬರ ತಾಲೂಕ ಘೋಷಣೆ ಹಿನ್ನೆಲೆ ಪರಿಹಾರ ನೀಡಬೇಕು. ರಾಜಕೀಯ ಪರಸ್ಪರ ಕಿತ್ತಾಟದಲೇ ಕಾಲಹರಣ ಮಾಡುತ್ತಿರುವ ಸರಕಾರಗಳು ರೈತರ ಬಗ್ಗೆ ಒಂದಿಷ್ಟು ಗಮನಹರಿಸುತ್ತಿಲ್ಲ ಎಂದು ದೂರಿದರು.
ಮೆಣಸಿನಕಾಯಿ, ಭತ್ತ, ಹತ್ತಿ ಸೇರಿದಂತೆ ಇತರೆ ಬೆಳೆಗಳಿಗೆ ನೀರಿನ ಅಭಾವ ಉಂಟಾದರಿಂದ ಬೆಳೆಗಳು ಬಾಡುತ್ತಿದ್ದು, ರೈತರ ಬೇಡಿಕೆಯಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಸಮಪರ್ಕವಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಶೇ. 86.02ರಷ್ಟು ಮತದಾನ
ಇದೇ ಸಂದರ್ಭದಲ್ಲಿ ಮೌನೇಶ ಜಾಲಹಳ್ಳಿ, ಮಹಾಲಿಂಗ ದೊಡ್ಡಮನಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ತೇಲ್ಕರ್, ರಾಜು ನಾಯಕ, ಸಂತೋಷ ತ್ಯಾಪ್ಲಿ, ಲಕ್ಷ್ಮಣ ಪರಪೂರ, ನಾಗರಾಜ ಪರಪೂರ, ಶರಣಪ್ಪ ಕಾರಲಗುಂಟಿ, ಚಂದ್ರಶೇಖರ, ನರೇಶ್, ಬಸವರಾಜ ಲಿಂಗದಹಳ್ಳಿ, ಹನುಮಂತ ಮಂಡಲಗುಡ್ಡ, ಬಸವರಾಜ ವಂದಲಿ, ವೆಂಕಟೇಶ ತ್ಯಾಪ್ಲಿ, ಮಲ್ಲಯ್ಯ, ಅಬ್ರಂ ಕಮಲದಿನ್ನಿ ಸೇರಿದಂತೆ ಇತರರು ಇದ್ದರು.





