ರಾಷ್ಟ್ರೀಕೃತ ಬ್ಯಾಂಕಿನ ಹೆಸರಿನಲ್ಲಿ ಎಪಿಕೆ (APK) ಫೈಲ್ ಕಳುಹಿಸಿ ವೃದ್ಧರೊಬ್ಬರನ್ನು ಮೋಸಗೊಳಿಸಿದ ಸೈಬರ್ ಕಳ್ಳರು ₹4.28 ಲಕ್ಷ ಹಣವನ್ನು ಕಬಳಿಸಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡಗಾವಿಯ ಸುರೇಶ ರಾಮಚಂದ್ರ ಮುರ್ವೆ ಹಣ ಕಳೆದುಕೊಂಡವರು. ಬ್ಯಾಂಕ್ ಹೆಸರಿನಲ್ಲಿ ಬಂದ ಎಪಿಕೆ ಫೈಲ್‌ನ್ನು ಯಾವುದೋ ಅಧಿಕೃತ ದಾಖಲೆ ಇರಬಹುದು ಎಂದು ಭಾವಿಸಿ ಕ್ಲಿಕ್ ಮಾಡುತ್ತಿದ್ದಂತೆಯೇ ಅವರ ಮೊಬೈಲ್ ಹ್ಯಾಕ್ ಆಗಿದೆ. ಬಳಿಕ ವಂಚಕರು ಖಾತೆಯ ವಿವರಗಳನ್ನು ದುರುಪಯೋಗಪಡಿಸಿಕೊಂಡು ₹4.28 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೈಬರ್ ಅಪರಾಧಿಗಳ ಇಂತಹ ಹೊಸ ತಂತ್ರಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಪರಿಚಿತ ಮೂಲಗಳಿಂದ ಬರುವ ಎಪಿಕೆ ಫೈಲ್‌ಗಳು, ಲಿಂಕ್‌ಗಳು ಅಥವಾ ಸಂದೇಶಗಳನ್ನು ತೆರೆಯಬಾರದು ಹಾಗೂ ಬ್ಯಾಂಕ್ ಸಂಬಂಧಿತ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.




