ಪ್ರಧಾನಿ ನರೇಂದ್ ಮೋದಿ ಶನಿವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ವಿರುದ್ಧ ಸಿಪಿಐ ಸಂಸದ ಪಿ. ಸಂದೋಷ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಭಾಷಣದ ಮೂಲಕ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಸಿಪಿಐ ಸಂಸದ ಆರೋಪಿಸಿದ್ದಾರೆ.
ಐದು ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣವು ರಾಜಕೀಯದಿಂದ ಕೂಡಿತ್ತು. ಪಕ್ಷಪಾತದಿಂದ ಕೂಡಿತ್ತು ಎಂದು ಪತ್ರದಲ್ಲಿ ಬರೆಯಲಾಗಿದೆ. ದೂರದರ್ಶನ ಮತ್ತು ಸಂಸದ್ ಟಿವಿಯಂತಹ ಸಾರ್ವಜನಿಕ ವೇದಿಕೆಗಳನ್ನು ತಮ್ಮ ರಾಜಕೀಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ದೂರಿದ್ದಾರೆ.
ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿಲ್ಲ, ಕ್ಷಮಿಸಿ: ಪಿಎಂ ನರೇಂದ್ರ ಮೋದಿ
“ಸಾರ್ವಜನಿಕವಾಗಿ ಹಣ ಪಡೆದ ವೇದಿಕೆಗಳನ್ನು ಮೂಲಭೂತವಾಗಿ ರಾಜಕೀಯ ಭಾಷಣಕ್ಕಾಗಿ ಬಳಸುವುದು ಚುನಾವಣಾ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗವು ಸಮಾನ ಸ್ಪರ್ಧೆ ಇರುವಂತೆ ನೋಡಿಕೊಳ್ಳಬೇಕು. ಕ್ರಮಕೈಗೊಳ್ಳುವಲ್ಲಿ ಚುನಾವಣಾ ಆಯೋಗ ವಿಫಲವಾದರೆ ಆಯೋಗದ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕರ ವಿಶ್ವಾಸ ಕುಸಿಯಬಹುದು” ಎಂದರು.

ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಲಾದ ಮಹಿಳಾ ಮೀಸಲಾತಿ ಮಸೂದೆಯು ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿದೆ. ಮಸೂದೆಯ ಪರವಾಗಿ 298 ಮತಗಳು ಬಂದರೆ, ವಿರುದ್ಧವಾಗಿ 230 ಮತಗಳು ಬಿದ್ದವು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಪಕ್ಷಗಳನ್ನು ಟೀಕಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೇಶವನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





