ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಅನಂತಪುರ ಗ್ರಾಮದ ತುಕಾರಾಮ ಇರಕರ್ ಕುಟುಂಬ ನಾಲ್ವರು ಸದಸ್ಯರು ಹರಿಯಾಣದ ವಿವಾದಿತ ಸಂತ ಬಾಬಾ ರಾಮಪಾಲ್ ಪ್ರವಚನದ ಪ್ರಭಾವಕ್ಕೆ ಒಳಗಾಗಿ ದೇಹತ್ಯಾಗಕ್ಕೆ ಮುಂದಾಗಿದ್ದ ಘಟನೆ ಮೌಢ್ಯ ಎಷ್ಟು ಭಯಾನಕ ಪರಿಣಾಮ ಉಂಟುಮಾಡಬಲ್ಲದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
ಧರ್ಮ, ಭಕ್ತಿ ಮಾನವನ ಆತ್ಮಶಕ್ತಿ ಬೆಳೆಸುವ ಶಕ್ತಿಯಾಗಬೇಕು. ಆದರೆ ಕೆಲವರು ಇದನ್ನು ದುರುಪಯೋಗ ಪಡಿಸಿಕೊಂಡು ಮೌಢ್ಯ, ಅಂಧಶ್ರದ್ಧೆ ಮತ್ತು ಪ್ರಾಣತ್ಯಾಗದ ಭ್ರಮೆಗಳನ್ನು ಬಿತ್ತುವಾಗ, ಬಲಿಯಾಗುವವರು ಸಾಮಾನ್ಯ ಕುಟುಂಬಗಳೇ. “ಬಾಬಾ ನಮ್ಮನ್ನು ಕರೆದೊಯ್ಯುತ್ತಾರೆ, ಮೋಕ್ಷ ಕೊಡಿಸುತ್ತಾರೆ” ಎಂಬ ಭ್ರಮೆಯಿಂದಲೇ ಇರಕರ್ ಕುಟುಂಬ ಸಾಮೂಹಿಕ ದೇಹತ್ಯಾಗಕ್ಕೆ ಸಿದ್ಧವಾಗಿತ್ತು.
ಘಟನೆ ಬೆಳಕಿಗೆ ಬಂದ ನಂತರ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಹಾಗೂ ಕವಲಗುಡ್ಡದ ಅಮರೇಶ್ವರ ಮಹಾರಾಜರು ತುಕಾರಾಮ ಇರಕರ್ ಕುಟುಂಬ ಭೇಟಿ ಮಾಡಿ ಬುದ್ದಿವಾದ ಹೇಳಿದ್ದಾರೆ.
ಬಾಬಾ ರಾಮಪಾಲ್ ಮಹಾರಾಷ್ಟ್ರ ಪೋಲಿಸರ ವಶದಲ್ಲಿದ್ದು ಮೌಡ್ಯಕ್ಕೆ ಬಲಿಯಾಗದೆ ಉತ್ತಮ ಜೀವನ ಸಾಗಿಸುವಂತೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ ಇದರಿಂದ ಕುಟುಂಬ ಸಾವಿನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ
ಅಧಿಕಾರಿಗಳ ತ್ವರಿತ ಜಾಗೃತಿ, ಸ್ಥಳೀಯ ಧಾರ್ಮಿಕ ಮುಖಂಡರ ಬುದ್ಧಿವಾದದಿಂದ ಈ ಕುಟುಂಬ ದೇಹತ್ಯಾಗದಿಂದ ಹಿಂದೆ ಸರಿದಿರುವುದು ಸಮಾಧಾನದ ಸಂಗತಿ. ಆದರೆ ಮೌಢ್ಯವನ್ನು ತಡೆಗಟ್ಟದೆ ಇದ್ದರೆ ನಾಳೆ ಇನ್ನೂ ಅನೇಕ ಕುಟುಂಬಗಳು ಹಾನಿಗೊಳಗಾಗುವ ಭೀತಿ ಇದೆ.
ಮೌಢ್ಯ ನಿರ್ಮೂಲನೆಗೆ ಸರ್ಕಾರ, ಸಂಘಟನೆಗಳು, ಮಾಧ್ಯಮಗಳು ಹೆಚ್ಚಿನ ಹೊಣೆ ಹೊತ್ತು ಕಾರ್ಯ ನಿರ್ವಹಿಸಬೇಕು.
ಅನಂತಪುರ ಗ್ರಾಮದ ಈ ಘಟನೆ ಅಂಧಶ್ರದ್ಧೆ ಹಾಗೂ ಮೌಢ್ಯದ ಅಪಾಯವನ್ನು ಎಚ್ಚರಿಸುವ ಗಂಭೀರ ಪಾಠವಾಗಿದೆ. ತುಕಾರಾಮ ಇರಕರ್ ಕುಟುಂಬ ಅಧಿಕಾರಿಗಳ ಜಾಗೃತಿ ಮತ್ತು ಸಮಾಜಮುಖಿ ವ್ಯಕ್ತಿಗಳ ಬುದ್ಧಿವಾದದಿಂದ ದೇಹತ್ಯಾಗದ ನಿರ್ಧಾರದಿಂದ ಹಿಂದೆ ಸರಿದರೂ, ಇದೇ ಘಟನೆ ಮತ್ತೆ ಮರುಕಳಿಸದಂತೆ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗುವುದು ಅಗತ್ಯ.