ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕುಡಚಿ ಪಟ್ಟಣದ ಹೊರವಲಯದ ಸಾಗರನಗರದಲ್ಲಿ ಹಣಕಾಸಿನ ವಿಚಾರಕ್ಕೆ ನಡೆದ ಜಗಳ ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ನಡೆದಿದೆ.
ಯಾಸಿನ್ ಜಾತಗಾರ ಎಂಬ ಯುವಕನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದ ಆರೋಪಿಯಾಗಿರುವ ರೋಹಿತ್ ಜಾಧವ್ ತಾನೇ ನೇರವಾಗಿ ಕುಡಚಿ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಎಸ್ಪಿ ಭೀಮಾಶಂಕರ್ ಗುಳೇದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರೋಪಿ ರೋಹಿತ್ ಜಾಧವ್ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ತಾನೇ ಶರಣಾಗಿದ್ದಾನೆ. ಕೊಲೆಗೆ ಬಳಸಲಾದ ಚಾಕು ಮೃತ ಯುವಕನ ದೇಹದ ಬೆನ್ನಿನಲ್ಲಿ ಪತ್ತೆಯಾಗಿದೆ. ಮೃತ ಯಾಸಿನ್ ಜಾತಗಾರನ ಕುಟುಂಬಸ್ಥರು ಇನ್ನಿಬ್ಬರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಅವರ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.
ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.