ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದ ಅಪ್ಪಯ್ಯ ಸ್ವಾಮಿ ಮತ್ತು ಚಂದ್ರಯ್ಯ ಸ್ವಾಮಿಜಿ ರಥೋತ್ಸವದ ಗದ್ದಲದ ಮಧ್ಯೆ, ಶಿವಾನಂದ ಸಿದ್ದಪ್ಪ ಬಿಳ್ಳೂರ ಅವರಿಗೆ ದಾರಿಯಲ್ಲಿ 30 ಗ್ರಾಂ ಚಿನ್ನದ ಸರ ಕಾಣಿಸಿತು. ಚಿನ್ನವನ್ನು ಕಂಡ ತಕ್ಷಣ, ಅದನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡ ಅವರು, ಯಾವುದೇ ಲಾಭದ ಆಸೆಗೆ ಒಳಗಾಗದೆ, ಸಾರ್ವಜನಿಕವಾಗಿ ಘೋಷಣೆ ಮಾಡಿದರು. ರಥೋತ್ಸವದ ಮುಖ್ಯ ವೇದಿಕೆಯಲ್ಲಿ ಧ್ವನಿವರ್ಧಕದ ಮೂಲಕ, “ನಮಗೆ ಚಿನ್ನದ ಸರ ಸಿಕ್ಕಿದೆ, ಯಾರಾದರೂ ಕಳೆದುಕೊಂಡಿದ್ದರೆ, ಸೂಕ್ತ ಸಾಕ್ಷಿಯೊಂದಿಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ತೆಗೆದುಕೊಂಡು ಹೋಗಬಹುದು” ಎಂದು ತಿಳಿಸಿದರು. ಈ ಪ್ರಕಟಣೆಯು ಗ್ರಾಮಸ್ಥರಲ್ಲಿ ಶಿವಾನಂದರ ಪ್ರಾಮಾಣಿಕತೆಯ ಬಗ್ಗೆ ಮೆಚ್ಚುಗೆಯನ್ನು ತಂದಿತು
ಬೆಂಗಳೂರಿನ ನಿವಾಸಿಯಾದ ಶ್ವೇತಾ ಸಿಂಗ್ ಎಂಬುವರು ಈ ರಥೋತ್ಸವದಲ್ಲಿ ಭಾಗವಹಿಸಿದ್ದ ವೇಳೆ, ಆಕಸ್ಮಿಕವಾಗಿ 30 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವ ಈ ಕಾಲದಲ್ಲಿ, ಅಂತಹ ಮೌಲ್ಯಯುತ ಆಭರಣವನ್ನು ಕಳೆದುಕೊಂಡ ಶ್ವೇತಾ ಸಿಂಗ್ ದಂಪತಿಗೆ ಆ ದಿನ ಆಘಾತಕಾರಿಯಾಗಿತ್ತು. ಆದರೆ, ಈ ಘಟನೆಯು ಶಿವಾನಂದ ಸಿದ್ದಪ್ಪ ಬಿಳ್ಳೂರ ಎಂಬ ಯುವಕನಿಂದಾಗಿ ಸಂತಸದ ಕ್ಷಣವಾಗಿ ಮಾರ್ಪಟ್ಟಿತು.
ಚಿನ್ನದ ಸರವನ್ನು ಮರಳಿ ಪಡೆದ ವಿಕ್ರಂ ಸಿಂಗ್ ದಂಪತಿಗಳು ಶಿವಾನಂದರ ಪ್ರಾಮಾಣಿಕತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಗ್ರಾಮದ ಹಿರಿಯರಿಗೆ ಮತ್ತು ಶಿವಾನಂದರಿಗೆ ಧನ್ಯವಾದ ಸೂಚಿಸಿ, “ಇಂತಹ ಒಳ್ಳೆಯ ಮನಸ್ಸಿನ ಜನರಿಂದಾಗಿ ಸಮಾಜದಲ್ಲಿ ಇನ್ನೂ ನಂಬಿಕೆ ಉಳಿದಿದೆ” ಎಂದು ತಿಳಿಸಿದರು.