ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೆಲಕಾಲ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು. ವಿದ್ಯಾರ್ಥಿನಿಯರನ್ನು ಚುಡಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಎರಡು ಗ್ರಾಮದ ಯುವಕರು ಪರಸ್ಪರ ಬೆಲ್ಟ್ ಹಾಗೂ ಬಡಿಗೆಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜಕ್ಕಬಾಳ ಮತ್ತು ಬಸರಗಿ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನದಂತೆ ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಜಕ್ಕಬಾಳ ಗ್ರಾಮದ ಕೆಲ ಯುವಕರು, ಬಸರಗಿ ಗ್ರಾಮದ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬಸ್‌ನಲ್ಲೇ ಆರಂಭವಾದ ಮಾತಿನ ಚಕಮಕಿ, ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿದೆ.
ತಮ್ಮ ಗ್ರಾಮದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗಿದೆ ಎಂದು ಆಕ್ರೋಶಗೊಂಡ ಬಸರಗಿ ಗ್ರಾಮದ ಯುವಕರು, ಜಕ್ಕಬಾಳ ಗ್ರಾಮದ ಯುವಕರೊಂದಿಗೆ ನಡುರಸ್ತೆಯಲ್ಲೇ ಘರ್ಷಣೆಗೆ ಇಳಿದಿದ್ದಾರೆ. ಪರಸ್ಪರ ಬೆಲ್ಟ್ಗಳನ್ನು ಬಿಚ್ಚಿ ಹಾಗೂ ಬಡಿಗೆಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ರಸ್ತೆಯಲ್ಲೇ ವಿದ್ಯಾರ್ಥಿಗಳು ರಣಕಾಳಿಗಳಂತೆ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಟ್ಟರು. ಬಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ಸಮರ್ಪಕ ಸುರಕ್ಷತೆ ಕಲ್ಪಿಸಬೇಕು ಹಾಗೂ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




