ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮದ ವಿರುದ್ಧದ ಕಾಕ್ರೋಚ್‌ಗಳ ಹೋರಾಟಕ್ಕೆ ಮೋದಿ ಸರ್ಕಾರ ಮಣಿದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷಗಳ ನಾಯಕರು, “ಇದು ಪ್ರಜಾಪ್ರಭುತ್ವ ಮತ್ತು ಯುವಜನತೆಗೆ ಸಿಕ್ಕ ಬೃಹತ್ ಜಯ. ಮೋದಿ ಅವರ ಅಹಂಕಾರದ ಸೋಲು” ಎಂದು ಬಣ್ಣಿಸಿದ್ದಾರೆ.
ಪ್ರಧಾನ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ವಿದ್ಯಾರ್ಥಿಗಳ ಧ್ವನಿಯು ಕೊನೆಗೂ ಅಹಂಕಾರಿ ಆಡಳಿತದ ಮನೆಬಾಗಿಲನ್ನು ತಲುಪಿದೆ” ಎಂದು ಹೇಳಿದ್ದಾರೆ.
“ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಬೀದಿಗಿಳಿದು ಹೋರಾಡಿದ ಲಕ್ಷಾಂತರ ಯುವಕರ ಗೆಲುವ ಇದು. ಇದು ಸತ್ಯಕ್ಕೆ ಸಿಕ್ಕ ಜಯ. ಮೋದಿಯವರ ಹಠಮಾರಿತನಕ್ಕೆ ಎದುರಾದ ಸೋಲು. ದೇಶದ ಯುವಕರ ಮೇಲೆ ಲಾಠಿಚಾರ್ಜ್ ಮತ್ತು ಪೆಲೆಟ್ ಗನ್ ಪ್ರಹಾರ ನಡೆಸಿದ್ದಕ್ಕಾಗಿ ಈಗ ಪ್ರಧಾನಿ ಮೋದಿಯವರು ಯುವಜನತೆಯ ಕ್ಷಮೆಯಾಚಿಸಬೇಕು,” ಎಂದು ಖರ್ಗೆ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಎಎಪಿ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ಎಕ್ಸ್’ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದು, “ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಜಯ. ಯುವಜನರು ಮತ್ತು ಜೆನ್-ಜಿ ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ಸರ್ಕಾರದ ಅಹಂಕಾರ ಮುರಿದುಬಿದ್ದಿದೆ. ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು” ಎಂದಿದ್ದಾರೆ.
Congratulations to the entire country on Dharmendra Pradhan’s resignation. Big win for democracy. pic.twitter.com/whzjhwSjOs
— Arvind Kejriwal (@ArvindKejriwal) July 25, 2026
ಕಾಂಗ್ರೆಸ್ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ‘ಟ್ವೀಟ್’ ಮಾಡಿದ್ದು, “ಈ ರಾಜೀನಾಮೆ ತೀರಾ ಮುಂಚಿತವಾಗಿಯೇ ಬರಬೇಕಿತ್ತು. ಸರ್ಕಾರ ಈ ನಿರ್ಧಾರವನ್ನು ಬೇಗನೆ ತೆಗೆದುಕೊಂಡಿದ್ದರೆ ಇಷ್ಟೊಂದು ಹಾನಿಯಾಗುತ್ತಿರಲಿಲ್ಲ. ದೇಶದ ಯುವಜನತೆ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ, ಹೀಗಾಗಿ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸಿ ಹೊಸ ವ್ಯವಸ್ಥೆ ತರಬೇಕು,” ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅಧಿಕೃತ ಹೇಳಿಕೆಯಲ್ಲಿ; “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮೊದಲ ದಿನದಿಂದಲೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸಂಸತ್ತಿನಿಂದ ರಸ್ತೆಗಳವರೆಗೆ ಯುವಜನರಿಗೆ ನ್ಯಾಯ ಸಿಗುವಂತೆ ಹೋರಾಡಿದೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸುವವರೆಗೆ ಈ ಹೋರಾಟ ನಿಲ್ಲುವುದಿಲ್ಲ,” ಎಂದು ಹೇಳಿದೆ.




