ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಮರಾಠಿ ಬರಲ್ಲ ಎಂದಿದ್ದಕ್ಕೆ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜರುಗಿಸಲು ಗೃಹ ಸಚಿವರ ಜೊತೆ ಮಾತನಾಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಹಲ್ಲೆಗೆ ಒಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಕಾರಣ ಮಹಾದೇವ ಆತಂಕಗೊಂಡಿದ್ದಾರೆ, ಈ ಪ್ರಕರಣ ದಾಖಲಿಸಿಕೊಳ್ಳುವಾಗ ಪೊಲೀಸರು ಸಾಮಾನ್ಯ ಜ್ಞಾನವನ್ನೂ ಬಳಸಿಲ್ಲ. ಈ ಪ್ರಕರಣ ಹಿಂದಕ್ಕೆ ಪಡೆಯುವ ಹಾಗೂ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ಜರುಗಿಸುವ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಮಾತನಾಡುವುದಾಗಿ” ಸುದ್ದಿಗಾರರಿಗೆ ಸಚಿವರು ತಿಳಿಸಿದ್ದಾರೆ.