ರಾಜೀವ್ ಗಾಂಧಿ ವಸತಿ ನಿಗಮದ ಮನೆ ಮಂಜೂರಾತಿಗೆ ಸಂಬಂಧಿಸಿದಂತೆ ಬಹಿರಂಗವಾದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರ ಆಡಿಯೋ ಮುಖಾಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತೊಮ್ಮೆ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಬೆಳಗಾವಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಬಿ.ಆರ್. ಪಾಟೀಲ ಅವರ ಆಡಿಯೋ ಕೋಟ್ಯಂತರ ರೂಪಾಯಿ ಲೆಕ್ಕವಿಲ್ಲದ ವ್ಯವಹಾರ ನಡೆಯುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ಹಿಂದೆ ಶಾಸಕ ಬಸವರಾಜ ರಾಯರೆಡ್ಡಿ ಕೂಡ ಸರ್ಕಾರದ ಒಳಗಿನ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು,” ಎಂದು ಹೇಳಿದರು.
ಇದೇ ಸಂದರ್ಭದಲ್ಲೇ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಮೇಲೆ ವಾಗ್ದಾಳಿ ನಡೆಸಿ, “ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದಾಗ, ಸಾರ್ವಜನಿಕರಿಂದ ‘ಹಣ ಕೊಟ್ಟವರ ಕೆಲಸವೇ ಬೇಗ ಆಗುತ್ತದೆ’ ಎಂಬ ದೂರು ಕೇಳಿ ಬಂದಿದ್ದು, ಇದು ಆಡಳಿತ ವ್ಯವಸ್ಥೆಯ ದುರಸ್ತಿ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ,” ಎಂದು ಹೇಳಿದರು. ಸಚಿವರು ಅಧಿಕಾರಿಗಳಿಗೆ ‘ನಿರ್ದಿಷ್ಟ ಕೆಲಸದ ದರ ಫಲಕ’ ಅಳವಡಿಸಲು ಸೂಚಿಸಿರುವುದನ್ನು ಅವರು ಭ್ರಷ್ಟಾಚಾರಕ್ಕೆ ಪೂರಕವಾದ ನಿರ್ಧಾರವೆಂದು ವಿವರಿಸಿದರು.
ಅಲ್ಲದೆ, “ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಸ್ವಾಸ್ಥ್ಯಕ್ಕಾಗಿ ಅವರು ತಕ್ಷಣ ರಾಜೀನಾಮೆ ನೀಡುವುದು ಸೂಕ್ತ,” ಎಂದು ಶೆಟ್ಟರ್ ಒತ್ತಾಯಿಸಿದರು.