ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಬಳಿ ಭಾನುವಾರ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಸ್ಥಳೀಯವಾಗಿ ಆತಂಕ ಮತ್ತು ಕುತೂಹಲ ಮೂಡಿಸಿದೆ.
ಖಾನಾಪುರ ತಾಲೂಕಿನ ನಂದಗಡದ ದುರ್ಗಾ ನಗರದ ಅಶ್ವಿನಿ ಬಾಬುರಾವ್ ಪಾಟೀಲ (50) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಾಗಿದ್ದರು.
ಅಶ್ವಿನಿ ಅ. 2 ರಂದು ಕಕ್ಕೇರಿ ಜಾತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಜಾತ್ರೆಯಿಂದ ವಾಪಸ್ಸಾಗುವ ವೇಳೆ ಬೀಡಿ ಗ್ರಾಮದಲ್ಲಿ ಇಳಿದು ಸ್ವಲ್ಪ ಕೆಲಸ ಇದೆ ಎಂದು ಹೇಳಿದ್ದರು. ಆದರೆ ಬಳಿಕ ಮನೆಗೆ ಹಿಂದಿರಲಿಲ್ಲ.
ಮಗನು ಅವರ ನಾಪತ್ತೆಯ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಶನಿವಾರ ವಾಹನವೊಂದರ ಚಾಲಕ ತಿನೈಘಾಟ್ ಸೇತುವೆ ಕೆಳಗೆ ನೀರಿನಲ್ಲಿ ಶವ ತೇಲುತ್ತಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದರು. ಮೃತದೇಹದ ಪಕ್ಕದಲ್ಲಿ ಸಿಕ್ಕ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಪರಿಶೀಲನೆಯ ವೇಳೆ ಅಶ್ವಿನಿ ಅವರ ಮೊಬೈಲ್‌ನಿಂದ ಮನೆಯವರಿಗೆ “ಬೆಂಗಳೂರುಗೆ ಹೋಗುತ್ತಿದ್ದೇನೆ” ಮತ್ತು ಬಳಿಕ “ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂಬ ಸಂದೇಶಗಳು ಕಳುಹಿಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ಕೊಲೆಯೋ, ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬುದು ಸ್ಪಷ್ಟವಾಗಿಲ್ಲ. ನಂದಗಡ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.